![](https://kannadadunia.com/wp-content/uploads/2025/02/bhishnappa.jpg)
ಹಾವೇರಿ: ಸಾವನ್ನಪ್ಪಿದ್ದಾನೆಂದು ಆಸ್ಪತ್ರೆಯಿಂದ ಊರಿಗೆ ಕರೆತರುತ್ತಿದ್ದಾಗ ಏಕಾಏಕಿ ಎದ್ದುಕುಳಿತಿದ್ದ ವ್ಯಕ್ತಿ ಕೆಲವೇ ದಿನಗಳಲ್ಲಿ ಮತ್ತೆ ಸಾವಿನ ಮನೆ ಸೇರಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಬಿಷ್ಣಪ್ಪ ಗುಡಿಮನಿ (45) ಮೃತ ದುರ್ದೈವಿ. ಹಾವೇರಿ ಜಿಲ್ಲೆಯ ಬಂಕಾಪುರದ ಬಿಷ್ಣಪ್ಪ ಗುಡಿಮನಿ ಕೆಲ ದಿನಗಳ ಹಿಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಧಾರವಾಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ ಕಾರಣಕ್ಕೆ ಕುಟುಂಬದವರು ಆಂಬುಲೆನ್ಸ್ ನಲ್ಲಿ ಊರಿಗೆ ಕರೆತರುತ್ತಿದ್ದರು. ಮಾರ್ಗಮಧ್ಯೆ ಬಿಷ್ಣಪ್ಪ ಅವರ ಇಷ್ಟದ ಡಾಬಾ ಸಮೀಪಿಸುತ್ತಿದ್ದಂತೆ ಅವರ ಪತ್ನಿ ದು:ಖ ತಾಳಲಾರದೇ ನಿಮ್ಮ ಇಷ್ಟದ ಡಾಬಾ ಬಂತು, ಊಟ ಮಾಡುತ್ತೀರಾ? ಎಂದು ಕಣ್ಣೀರಿಟ್ಟು ಗೋಳಾಡುತ್ತಿದ್ದಂತೆ ಏಕಾಏಕಿ ಎದ್ದುಕುಳಿತು ಉಸಿರಾಡತೊಡಗಿದ್ದರು. ಸತ್ತ ವ್ಯಕ್ತಿ ಬದುಕಿದ್ದು ಕಂಡು ಕುಟುಂಬದವರು ಆಂಬುಲೆನ್ಸ್ ನ್ನು ಮಾರ್ಗಮಧ್ಯೆಯೇ ತಿರುಗಿಸಿ ಬಿಷ್ಣಪ್ಪರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಬಿಷ್ಣಪ್ಪ ಕೆಲ ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಉತ್ತಮವಾಗಿಯೇ ಸ್ಪಂದಿಸುತ್ತಿದ್ದರು. ಸಾವನ್ನಪ್ಪಿದ್ದ ಪತಿ ಪವಾಡದ ರೀತಿ ಬದುಕಿದ್ದು ಕಂಡು ಪತ್ನಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಇನ್ನೇನು ಬಿಷ್ಣಪ್ಪ ಗುಣಮುಖರಾಗುತ್ತಿದ್ದಾರೆ ಎನ್ನುವಾಗಲೇ ಪತ್ನಿಗೆ ಮತ್ತೆ ಬರಸಿಡಿಲು ಬಡಿದಂತಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಷ್ಣಪ್ಪ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಬಿಷ್ಣಪ್ಪ ನಿಧನರಾಗಿದ್ದಾಗಿ ವೈದ್ಯರು ತಿಳಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.