ಹಾವೇರಿ: ಒಂದರಿಂದ ಐದನೇ ತರಗತಿ ಆರಂಭಿಸುವ ಕುರಿತು ಅಧಿವೇಶನ ಮುಗಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ದೇವರಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನ ಮುಗಿದ ನಂತರ ಒಂದರಿಂದ ಐದನೇ ತರಗತಿ ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಒಂದರಿಂದ ಐದನೇ ತರಗತಿ ಆರಂಭಿಸುವ ಕುರಿತು ಅಭಿಪ್ರಾಯ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಶಾಲೆಗಳನ್ನು ಆರಂಭಿಸಬಾರದೆಂಬ ಉದ್ದೇಶವಿಲ್ಲ. ತಾಂತ್ರಿಕ ಸಲಹಾ ಸಮಿತಿ, ತಜ್ಞರು ಅಭಿಪ್ರಾಯ ತಿಳಿಸಿದರೆ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ, ಶಿಕ್ಷಕರು ಸಿದ್ಧವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.