![](https://kannadadunia.com/wp-content/uploads/2022/10/karnataka-lokayukta.jpg)
ಹಾವೇರಿ: ಏಷ್ಯಾದ ನಂಬರ್ 1 ಮೆಣಸಿನಕಾಯಿ ಮರುಕಟ್ಟೆ ಎಂದೇ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತೂಕದಲ್ಲಿ ಮೋಸ ಮಾಡುತ್ತಿರುವುದುದನ್ನು ಪತ್ತೆ ಮಾಡಿದ್ದಾರೆ.
ಉಪ ಲೋಕಾಯುಕ್ತ ಬಿ.ವೀರಪ್ಪ ನೇತೃತ್ವದ ಅಧಿಕಾರ ತಂಡ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ತೂಕದಲ್ಲಿ ಮೋಸ ಮಾಡುತ್ತಿರುವುದು ಕಂಡು ಬಂದಿದೆ.
ಮಾರುಕಟ್ಟೆ ಕಾರ್ಯದರ್ಶಿ ಶೈಲಜಾ ಎಂ.ವಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸುವಂತೆ ಉಪಲೋಕಾಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರತಿ ಮಳಿಗೆಗೂ ಭೇಟಿ ನೀಡಿದ ಉಪಲೋಕಾಯುಕ್ತರು, ತೂಕದಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದರು. ಅಲ್ಲದೇ ಬಿಲ್ ಪುಸ್ತಕದಲ್ಲಿಯೂ ಲೋಪ ಕಂಡುಬಂದಿರುವುದನ್ನು ತಿಳಿಸಿದ್ದಾರೆ. ಈ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆದ ಉಪಲೋಕಾಯುಕ್ತರು, ಏಷ್ಯಾದ ನಂಬರ್ 1 ಮಾರುಕಟ್ಟೆ ಎಂದು ಹೇಳುತ್ತೀರಾ. ಆದರೆ ಇಲ್ಲಿ ತೂಕದ ಯಂತ್ರವೇ ಸರಿ ಇಲ್ಲ. ಎಪಿಎಂಸಿ ಕಚೇರಿಯಲ್ಲಿರುವ ತೂಕದ ಯಂತ್ರದಲ್ಲಿಯೂ ವ್ಯತ್ಯಾಸ ಕಾಣುತ್ತಿದೆ. ನಿಮಗೂ ಮೆಣಸಿನಕಾಯಿಯಲ್ಲಿ ಪಾಲು ಬರುತ್ತಿದೆಯೇ? ಎಂದು ಪ್ರಶ್ನಿಸಿದರು. ತಕ್ಷಣ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತೂಕ ಮತ್ತು ಮಾಪನ ಇಲಾಖೆ ನಿರೀಕ್ಶಕಿ ಲಲಿತಾ, ತೂಕದ ಯಂತ್ರ ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.