ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಂಗಳೂರು -ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿಯ ರಭಸಕ್ಕೆ 7 ಮಹಿಳೆಯರು ಸೇರಿ 13 ಜನ ಸಾವನ್ನಪ್ಪಿದ್ದಾರೆ.
ಪರಶುರಾಮ್(45), ಭಾಗ್ಯ(40), ನಾಗೇಶ(50), ವಿಶಾಲಾಕ್ಷಿ(40), ಅರ್ಪಿತಾ(18), ಸುಭದ್ರ ಬಾಯಿ(65), ಪುಣ್ಯ(50), ಮಂಜುಳಾ ಬಾಯಿ ಹಾಗೂ ಚಾಲಕ ಆದರ್ಶ(23), ಮಾನಸ(24), ರೂಪಾ(40), ಮಂಜುಳಾ(50) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೃತರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರೆಲ್ಲರೂ ಸಂಬಂಧಿಕರಾಗಿದ್ದು, ಚಿಂಚೋಳಿಯ ಮಾಯಮ್ಮ ದೇವಿ ದರ್ಶನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಟಿಟಿ ವಾಹನದಲ್ಲಿ 16 ಮಂದಿ ಪ್ರಯಾಣಿಸುತ್ತಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನ ನಜ್ಜುಗುಜ್ಜಾಗಿದ್ದು, ಮೃತ ದೇಹಗಳನ್ನು ಹೊರ ತೆಗೆಯಲು ಹರಸಾಹಸ ನಡೆಸಲಾಗಿದೆ. ಸ್ಥಳೀಯರ ನೆರವಿನೊಂದಿಗೆ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದು ಹಾವೇರಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.