ಬಿಸಿ ಬಿಸಿ ಅನ್ನಕ್ಕೆ ರುಚಿಕರವಾದ ಬದನೆಕಾಯಿ ಚಟ್ನಿ ಇದ್ದರೆ ಅನ್ನ ಮತ್ತಷ್ಟು ಹೊಟ್ಟೆಗೆ ಇಳಿಯುತ್ತದೆ. ಹಸಿರುಬಣ್ಣದ ಬದನೆಕಾಯಿಯಿಂದ ಇದನ್ನು ಮಾಡಿದ್ರೆ ಚೆನ್ನಾಗಿರುತ್ತದೆ. ಅದು ಇಲ್ಲದಿದ್ದರೆ ನೇರಳೆ ಬಣ್ಣದ ಬದನೆಕಾಯಿಯಿಂದನೂ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
10-ಸಣ್ಣ ಗಾತ್ರದ ಬದನೆಕಾಯಿ, 1.5 ಟೇಬಲ್ ಸ್ಪೂನ್-ಧನಿಯಾ ಬೀಜ, 1 ಟೇಬಲ್ ಸ್ಪೂನ್-ಉದ್ದಿನಬೇಳೆ, 1/4 ಟೀ ಸ್ಪೂನ್-ಮೆಂತೆಕಾಳು, 7-ಒಣ ಮೆಣಸು, ½ ಟೇಬಲ್ ಸ್ಪೂನ್- ಹುಣಸೆಹಣ್ಣು, ¼ ಟೀ ಸ್ಪೂನ್- ಅರಿಶಿನ, 2 ½ ಟೇಬಲ್ ಸ್ಪೂನ್-ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಬದನೆಕಾಯಿಯನ್ನು ಕತ್ತರಿಸಿಕೊಂಡು ನೀರಿನಲ್ಲಿ ನೆನೆಸಿಡಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಹಾಗೇ ಧನಿಯಾ ಬೀಜ, ಉದ್ದಿನಬೇಳೆ, ಮೆಂತೆ ಹಾಕಿ ತುಸು ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಅದಕ್ಕೆ ಒಣಮೆಣಸು ಸೇರಿಸಿ ಫ್ರೈ ಮಾಡಿ ಒಂದು ತಟ್ಟೆಗೆ ತೆಗೆದುಕೊಳ್ಳಿ.
ನಂತರ ಬದನೆಕಾಯಿಯನ್ನು ನೀರಿನಿಂದ ತೆಗೆದು ಈ ಪ್ಯಾನ್ ಗೆ 1 ಚಮಚ ಎಣ್ಣೆ ಹಾಕಿಕೊಂಡು ಫ್ರೈ ಮಾಡಿ. ಅದಕ್ಕೆ ಅರಿಶಿನ, ಉಪ್ಪು ಸೇರಿಸಿ ಒಂದು ಪ್ಲೇಟ್ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಬದನೆಕಾಯಿಯನ್ನು ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದಕ್ಕೆ ಹುಣಸೆಹಣ್ಣು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ. ಹುರಿದುಕೊಂಡ ಮಸಾಲೆಯನ್ನು ಮೊದಲು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಬದನೆಕಾಯಿಯನ್ನು ಸೇರಿಸಿ ರುಬ್ಬಿಕೊಳ್ಳಿ. ತುಂಬಾ ನಯವಾಗಿ ರುಬ್ಬಿಕೊಳ್ಳಬೇಡಿ. ತರಿ ತರಿಯಾಗಿರಲಿ.