ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು 420 ಕಿಲೋ ಮೀಟರ್ ದೂರದಲ್ಲಿ ಶಿರಸಿ ಇದೆ. ರೈಲಿನಲ್ಲಿ ಬರುವವರು ತಾಳಗುಪ್ಪವರೆಗೆ ಬರಬಹುದು. ಹುಬ್ಬಳ್ಳಿವರೆಗೂ ರೈಲಿನಲ್ಲಿ ಬಂದು ಅಲ್ಲಿಂದ ರಸ್ತೆ ಮಾರ್ಗದಲ್ಲಿ ಶಿರಸಿ ತಲುಪಬಹುದಾಗಿದೆ.
ಶಿರಸಿ ಮಾರಿಕಾಂಬ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದು ಎಂದೇ ಹೆಸರಾಗಿದೆ. ಇಲ್ಲಿ ನಡೆಯುವ ಜಾತ್ರೆ ರಾಜ್ಯಕ್ಕೆ ಹೆಸರುವಾಸಿಯಾಗಿದೆ. ರಾಯರಪೇಟೆಯ ಗಣಪತಿ ದೇವಾಲಯಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ.
ಶಿರಸಿಯಿಂದ ಸುಮಾರು 22 ಕಿಲೋ ಮೀಟರ್ ದೂರದಲ್ಲಿ ಬನವಾಸಿ ಇದೆ. ಕ್ರಿ.ಶ. 6 ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಕದಂಬರ ರಾಜಧಾನಿಯಾಗಿದ್ದ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವಿದೆ. ವರ್ಷಕ್ಕೊಮ್ಮೆ ಕದಂಬೋತ್ಸವ ನಡೆಯುತ್ತದೆ.
ಸೋಂದಾ ಕೋಟೆ, ಮಠ, ಹುಣಸೆಹೊಂಡ ದೇವಾಲಯ, ಸ್ವರ್ಣವಲ್ಲಿ ಮಠ, ಮಂಜುಗುಣಿ ಮೊದಲಾದವು ಶಿರಸಿಗೆ ಸಮೀಪದಲ್ಲಿವೆ. ಹಸೇಹಳ್ಳ ಫಾಲ್ಸ್, ಸಹಸ್ರಲಿಂಗ, ಯಾಣ, ಉಂಚಳ್ಳಿ ಫಾಲ್ಸ್, ಸೇರಿದಂತೆ ಹಲವಾರು ನೋಡಬಹುದಾದ ಸ್ಥಳಗಳು ಶಿರಸಿ ಸುತ್ತಮುತ್ತ ಇವೆ. ಮೊದಲೇ ಮಾಹಿತಿ ಪಡೆದುಕೊಂಡು ಹೊರಟಲ್ಲಿ ಬೇಸಿಗೆಯಲ್ಲಿ ಉತ್ತಮ ಪ್ರವಾಸದ ಅನುಭವ ಪಡೆಯಬಹುದಾಗಿದೆ.