ಜಲಪಾತವೆಂದರೆ ಯಾರಿಗೆ ಇಷ್ಟವಿರಲ್ಲ. ಹಾಲಿನ ನೊರೆಯಂತೆ ಧುಮ್ಮಿಕ್ಕಿ ಹರಿಯುವ ಈ ಜಲಪಾತದ ಸೊಬಗನ್ನೇ ಕಣ್ತುಂಬಿಸಿಕೊಳ್ಳುವುದೇ ಆನಂದ. ಪ್ರವಾಸಿಗರ ಹಾಟ್ ಸ್ಪಾಟ್ ಹಸಿರನಾಡು ಕೊಡಗು, ಪ್ರತಿ ಮಳೆಗಾಲದಲ್ಲಿ ರಂಗೇರುತ್ತದೆ.
ಹಸಿರು ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಅಬ್ಬಿ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದು ಪ್ರವಾಸಿಗರ ಸ್ವರ್ಗ. ಹಸಿರನಾಡು ಕೊಡಗಿನ ಅಬ್ಬಿ ಜಲಪಾತದ ವೈಭವ ದೃಶ್ಯ ಕಾವ್ಯವನ್ನು ಇಷ್ಟಪಡದವರು ಯಾರು?
ಜಲಪಾತದ ಶಬ್ಧ, ಅದು ಹರಿಯುವ ರಭಸ, ಅದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಚುಮು ಚುಮು ಚಳಿಯೊಂದಿಗೆ ಕೈಗೆಟುಕುವಷ್ಟು ಹತ್ತಿರದಲ್ಲಿ ಸಾಗುವ ಮೋಡಗಳನ್ನು ನೋಡುವುದೇ ಒಂದು ಸೊಬಗು.
80 ಅಡಿ ಎತ್ತರದಿಂದ ಹಾಲ್ನೊರೆಯಂತೆ ಹರಿಯುವ ಜಲಪಾತವನ್ನು ನೋಡುತ್ತಾ ನಿಂತರೆ ಸ್ವರ್ಗವೇ ಧರೆಗೆ ಇಳಿದಂತೆ ಭಾಸವಾಗುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ತಮ್ಮ ಎಲ್ಲ ನೋವುಗಳನ್ನು ಮರೆತು ಪ್ರಕೃತಿಯ ಮಡಿಲಲ್ಲಿ ಮೈಮರೆಯುತ್ತಾರೆ. ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತಕ್ಕೆ ತಲುಪಲು ಎಲ್ಲ ಸೌಲಭ್ಯಗಳೂ ಇವೆ.