ಕೃಷ್ಣನಗರಿ ಉಡುಪಿಯಲ್ಲಿ ಹಲವು ಪುರಾತನ ದೇಗುಲಗಳಿವೆ. 8 ನೆಯ ಶತಮಾನದ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನವೂ ಬಹಳ ಕಾರಣಿಕದ್ದು.
ಕ್ರಿ.ಶ. 7 – 8ನೇ ಶತಮಾನದಿಂದ ಭಕ್ತರನ್ನು ರಕ್ಷಿಸುತ್ತಿದ್ದಾಳೆ ಎನ್ನುವುದು ನಂಬಿಕೆ. ಕಡೆಯಹಳ್ಳಿ, ಕುಡುಹಳ್ಳಿ ಇದ್ದಿದ್ದು ಕಡಿಯಾಳಿ ಹೆಸರು ಪಡೆಯಿತೆಂದು ಹೇಳಲಾಗಿದೆ. ಇಲ್ಲಿರುವ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ವಿಗ್ರಹವು ಕ್ರಿ.ಶ. 600 – 750ರವರ ಕಾಲಘಟ್ಟದ ಶಿಲ್ಪಶೈಲಿಯನ್ನು ಹೊಂದಿದೆ.
ಬಾದಾಮಿ ಚಾಲುಕ್ಯರ ಶಿಲ್ಪ ಲಕ್ಷಣವನ್ನು ವಿಗ್ರಹ ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಸುಮಾರು 30 ಇಂಚು ಎತ್ತರದ ವಿಗ್ರಹದಲ್ಲಿ ಪ್ರಸನ್ನತೆ ಮತ್ತು ವಿಜಯದ ಮಂದಹಾಸವಿದೆ.
ಕ್ಷೇತ್ರದ ದುರ್ಗೆ ನಿರಾಭರಣ ಸುಂದರಿ. ಕಿರೀಟ, ಕುಂಡಲ, ಕೊರಳಲ್ಲಿ ಒಂದು ತಾಳಿ ಮತ್ತು ಸೊಂಟದಲ್ಲಿ ಉಡ್ಡಾಣ ಅಷ್ಟೇ. ಉಡುಪಿಯ ಬಸ್ ನಿಲ್ದಾಣದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿದೆ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನ.