ಪ್ರವಾಸ ಹೋಗೋದು ಬಹುತೇಕ ಎಲ್ಲರ ನೆಚ್ಚಿನ ಹವ್ಯಾಸ. ಕೆಲವರಿಗೆ ಒಬ್ಬಂಟಿಯಾಗಿ ದೇಶ ಸುತ್ತುವ ಆಸೆ. ಈ ಸೋಲೋ ಟ್ರಿಪ್ ಕೂಡ ಒಂಥರಾ ಮಜವಾಗಿರುತ್ತದೆ. ಆದ್ರೆ ಈ ಪ್ರವಾಸದ ಸಂದರ್ಭದಲ್ಲಿ ಕೆಲವೊಂದು ವಿಷಯಗಳು ನಿಮ್ಮ ಗಮನದಲ್ಲಿರಬೇಕು.
ಏಕಾಂಗಿಯಾಗಿ ಪ್ರಯಾಣಿಸುವುದು ವಿದೇಶಿಯರ ವಿಶೇಷ ಹವ್ಯಾಸ. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಪ್ರವೃತ್ತಿಯು ಭಾರತದಲ್ಲೂ ವೇಗವಾಗಿ ಬೆಳೆಯುತ್ತಿದೆ. ನೀವೂ ಸಹ ಏಕಾಂಗಿಯಾಗಿ ಪ್ರವಾಸ ಮಾಡಬಯಸಿದರೆ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ಸಿದ್ಧತೆಗಳನ್ನು ಮಾಡಿಕೊಳ್ಳದೇ ಇದ್ದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.
ಮೊದಲು ನೀವು ಪ್ರವಾಸ ಹೋಗಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿಕೊಂಡ ಬಳಿಕ, ಬಜೆಟ್ ಸಿದ್ಧಪಡಿಸಿ. ಪ್ರಯಾಣ, ವಸತಿ ಮತ್ತು ಆಹಾರ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಈ ಬಜೆಟ್‌ನಲ್ಲಿ ಸೇರಿಸಬೇಕು. ಬಜೆಟ್ ರೆಡಿಯಾದ ಬಳಿಕ ಅದಕ್ಕೆ ಅನುಗುಣವಾಗಿ ಹಣದ ವ್ಯವಸ್ಥೆ ಮಾಡಿಕೊಳ್ಳಬೇಕು. ಆ ಸ್ಥಳಗಳಿಗೆ ಹೋಗುವ ಮೊದಲು ಅಲ್ಲಿನ ಹವಾಮಾನ, ಧರಿಸಬೇಕಾದ ಬಟ್ಟೆಗಳು, ಔಷಧ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ.
ಅಲ್ಲಿ ಸುತ್ತ ಮುತ್ತ ಯಾವ್ಯಾವ ಸ್ಥಳಗಳು ಭೇಟಿ ನೀಡಲು ಯೋಗ್ಯವಾಗಿದೆ? ಯಾವ ಸ್ಥಳಗಳಿಗೆ ತೆರಳಬಾರದು ಎಂಬುದನ್ನೂ ಪಟ್ಟಿ ಮಾಡಿಕೊಳ್ಳಿ. ಈ ಎಲ್ಲಾ ಮಾಹಿತಿಯನ್ನು ನೀವು ಆನ್‌ಲೈನ್‌ನಲ್ಲಿ ಪಡೆಯಬಹುದು. ಈ ವಿವರಗಳು ಸಿಕ್ಕಿದರೆ ನಿಮ್ಮ ಅನೇಕ ಸಮಸ್ಯೆಗಳು ಪರಿಹಾರವಾದಂತೆಯೇ ಲೆಕ್ಕ. ಮುಂಗಡ ಬುಕ್ಕಿಂಗ್ ಮಾಡಿದ ನಂತರ ಬ್ಯಾಗ್ ಪ್ಯಾಕಿಂಗ್ ಶುರು ಮಾಡಿ. ನಿಮ್ಮ ಹ್ಯಾಂಡ್ ಬ್ಯಾಗ್‌ನಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಇರಿಸಿ. ಇದನ್ನು ಭುಜದ ಮೇಲೆ ಹೊತ್ತೊಯ್ಯಲು ಸುಲಭವಾಗುತ್ತದೆ.
ಪ್ಯಾಕಿಂಗ್ ಮಾಡುವಾಗ ನೀವು ಪ್ರವಾಸ ಮಾಡುತ್ತಿರುವ ಸ್ಥಳಗಳ ವಿಶೇಷತೆಗೆ ತಕ್ಕಂತೆಯೇ ಬಟ್ಟೆಗಳನ್ನು ಜೋಡಿಸಿಕೊಳ್ಳಿ. ಬೇಡದ ವಸ್ತುಗಳನ್ನೆಲ್ಲ ಅನಾವಶ್ಯಕವಾಗಿ ಹೊತ್ತೊಯ್ದರೆ ಸಮಸ್ಯೆಯಾಗುತ್ತದೆ. ಹೋಟೆಲ್, ಹಾಸ್ಟೆಲ್ ಅಥವಾ ಅತಿಥಿ ಗೃಹಕ್ಕೆ ತೆರಳಿದ ಬಳಿಕ ಅಲ್ಲಿ ನಿಮಗೆ ಕೊಠಡಿ ನೀಡುವ ಮೊದಲು ನಿಮ್ಮ ಬುಕಿಂಗ್ ಸಂಖ್ಯೆ ಮತ್ತು ಐಡಿಯನ್ನು ಕೇಳಲಾಗುತ್ತದೆ. ಹಾಗಾಗಿ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಡಿಎಲ್ ತೆಗೆದುಕೊಂಡು ಹೋಗಿ. ನಿಮ್ಮ ಮೊಬೈಲ್‌ನಲ್ಲೇ ಅವುಗಳನ್ನು ಸೇವ್ ಮಾಡಿಕೊಳ್ಳಬಹುದು.
ನೀವು ಸೋಲೋ ಟ್ರಿಪ್‌ಗೆ ತೆರಳಲು ಬಯಸುವ ಸ್ಥಳದಲ್ಲಿ ನಿಮ್ಮ ವಾಸ್ತವ್ಯವನ್ನು ಮುಂಚಿತವಾಗಿ ಕಾಯ್ದಿರಿಸಿ. ಮುಂಗಡ ಬುಕ್ಕಿಂಗ್‌ನಲ್ಲಿ ಹೋಟೆಲ್ ಹಾಗೂ ಅತಿಥಿಗೃಹಗಳಲ್ಲಿ ಕೆಲವೊಂದು ವಿಶೇಷ ಆಫರ್‌ಗಳು ಸಹ ದೊರೆಯುತ್ತವೆ. ಸ್ಥಳೀಯರನ್ನು ಭೇಟಿ ಮಾಡಿ ಅವರ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳಬೇಕೆಂದರೆ ಅಲ್ಲಿನ ದೇವಾಲಯ ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬೇಕು. ಇದರಿಂದ ಆ ಪ್ರದೇಶದ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅವಕಾಶವೂ ದೊರೆಯುತ್ತದೆ. ಪ್ರಯಾಣದ ಸಮಯದಲ್ಲಿ ನೀವು ಸ್ಥಳೀಯ ಸಾರಿಗೆಯನ್ನು ಬಳಸಿದರೆ, ನಿಮ್ಮ ಖರ್ಚುಗಳನ್ನು ಸಹ ಉಳಿಸಬಹುದು. ವಿಶೇಷ ಅನುಭವ ಕೂಡ ನಿಮಗಾಗುತ್ತದೆ.