ದೋಸೆ ದಕ್ಷಿಣ ಭಾರತದ ಜನಪ್ರಿಯ ತಿಂಡಿ. ಈಗ ಉತ್ತರದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತವಾಗಿರುತ್ತದೆ. ಸಾಕಷ್ಟು ವೆರೈಟಿಯ ದೋಸೆಗಳಿವೆ. ಇವತ್ತು ನಾವ್ ನಿಮಗೆ ಪರಿಚಯಿಸ್ತಿರೋದು ತೆಂಗಿನಕಾಯಿ ದೋಸೆ.
ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಅರ್ಧ ಚಮಚ ಮೆಂತ್ಯ, ಅರ್ಧ ಚಿಪ್ಪು ತೆಂಗಿನ ಕಾಯಿ.
ಮಾಡುವ ವಿಧಾನ: ಎರಡು ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನೆಸಿಡಿ, ಅರ್ಧ ಚಮಚ ಮೆಂತ್ಯ ಮತ್ತು ತೆಂಗಿನ ತುರಿಯನ್ನು ಪ್ರತ್ಯೇಕವಾಗಿ ನೆನೆಸಿ. ತೆಂಗಿನ ತುರಿ, ಮೆಂತ್ಯ ಮತ್ತು ಅಕ್ಕಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ಉಪ್ಪು ಹಾಕಿ ಕಲಸಿ. ಈ ಹಿಟ್ಟನ್ನು 2-3 ಗಂಟೆಗಳ ಕಾಲ ಹಾಗೇ ಬಿಡಿ. ನಂತರ ನಾನ್ ಸ್ಟಿಕ್ ಕಾವಲಿ ಮೇಲೆ ದೋಸೆ ಹುಯ್ಯಿರಿ. ಗರಿ ಗರಿ ಆಗುವ ವರೆಗೂ ಬೇಯಿಸಿ. ಕಾಯಿ ಚಟ್ನಿ ಹಾಗೂ ಸಾಂಬಾರ್ ಜೊತೆಗೆ ದೋಸೆಯನ್ನು ಸವಿಯಿರಿ.