ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 116 ಜನರು ಸಾವನ್ನಪ್ಪಿದ್ದು, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ನೀಡಿದೆ.
ಸತ್ಸಂಗ ಕಾರ್ಯಕ್ರಮದಲ್ಲಿ ಏಕಏಕಿ ಕಾಲ್ತುಳಿತದಿಂದ ದುರಂತ ಸಂಭವಿಸಲು ತಕ್ಷಣದ ಕಾರಣಗಳೇನು? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹತ್ರಾಸ್ ನ ಪುಲ್ರೈ ಗ್ರಾಮದಲ್ಲಿ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಆರಂಭದಲ್ಲಿ ಸರಾಗವಾಗಿಯೇ ನಡೆದಿದ್ದ ಕಾರ್ಯಕ್ರಮ ಕೊನೇ ಹಂತದಲ್ಲಿ ದುರಂತಕ್ಕೆ ಕಾರಣವಾಗಿದೆ.
ಭೋಲೆ ಬಾಬಾ ಅವರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸತ್ಸಂಗದ ಪ್ರಚಾರಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಬಾಬಾ ಅವರಿಗೆ ನಮಸ್ಕರಿಸಲೆಂದು ಕೆಲ ಭಕ್ತರು ಪ್ರಯತ್ನಿಸಿದ್ದಾರೆ. ಇದೇ ವೇಳೆ ಕೆಲ ಭಕ್ತರ ಸಮೂಹ ಬಾಬಾ ಅವರನ್ನು ಸ್ಪರ್ಶಿಸಲು ಅವರತ್ತ ನುಗ್ಗಿದೆ. ಈ ವೇಳೆ ನೂಕು ನುಗ್ಗಲು ಆರಂಭವಾಗಿದೆ.
ಸ್ವಯಂ ಸೇವಕರು ಭಕ್ತರನ್ನು ತಡೆಯಲು ಯತ್ನಿಸಿದ್ದಾರೆ ಆದರೆ ಅಪಾರ ಜನಸಂಖ್ಯೆ ಇದ್ದುದರಿಂದ ಸಾಧ್ಯವಾಗಿಲ್ಲ. ಹಲವು ಭಕ್ತರು ಕೆಳಗೆ ಬಿದ್ದಿದ್ದಾರೆ. ಮೇಲೇಳಲು ಸಾಧ್ಯವಾಗದೇ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಇನ್ನು ಕಿಲೋಮೀಟರ್ ಗಟ್ಟಲೇ ದೂರದಲ್ಲಿ ವಾಹನ ನಿಲುಗಡೆ ಮಾಡಿದ್ದರಿಂದ ಕಾಲ್ತುಳಿತದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದೂ ಕೂಡ ವಿಳಂಬವಾಗಿದೆ. ಸೂಕ್ತ ಚಿಕಿತ್ಸೆ ನೀಡುವುದು ತಡವಾಗಿದೆ. ಇದು ಕೂಡ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ.
ಕಾಲ್ತುಳಿತ ಪ್ರಕರಣವನ್ನು ಡಿಜಿ ಆಗ್ರಾ ಅಧ್ಯಕ್ಷತೆಯಲ್ಲಿ ವಿಶೇಷ ತಂಡ ರಚಿಸಿ ಯೋಗಿ ಆದಿತ್ಯನಾಥ್ ಸರ್ಕಾರ ತನಿಖೆಗೆ ಆದೇಶ ನೀಡಿದೆ.