ಲಖನೌ: ಹತ್ರಾಸ್ ಕಾಲ್ತುಳಿತ ಪ್ರಕರಣದಲ್ಲಿ, ಬೋಧಕ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾನ ನಿಕಟವರ್ತಿ ದೇವಪ್ರಕಾಶ್ ಮಧುಕರ್ ಶರಣಾಗಿದ್ದಾನೆ. ಆತನನ್ನು ಉತ್ತರ ಪ್ರದೇಶ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮಧುಕರ್ ಅವರ ವಕೀಲ ಎಪಿ ಸಿಂಗ್, ಮಧುಕರ್ ಅವರು ನಜಾಫ್‌ಗಢದಲ್ಲಿ ದೆಹಲಿ ಪೊಲೀಸರಿಗೆ ಶರಣಾದರು, ನಂತರ ಅವರನ್ನು ಯುಪಿ ಪೊಲೀಸರಿಗೆ ಹಸ್ತಾಂತರಿಸಿದರು ಎಂದು ಹೇಳಿದ್ದಾರೆ.
ಮಧುಕರ್ ಮೇಲೆ ಬಹುಮಾನ
ಮಧುಕರ್ ಬಂಧನದ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. 121 ಜನರನ್ನು ಬಲಿತೆಗೆದುಕೊಂಡ ಕಾಲ್ತುಳಿತದ ನಂತರ ಅವರು ಓಡಿಹೋಗಿದ್ದರು. ಉತ್ತರ ಪ್ರದೇಶ ಪೊಲೀಸರು ರಾಜಸ್ಥಾನ, ದೆಹಲಿ ಮತ್ತು ಹರಿಯಾಣ ಸೇರಿದಂತೆ ನೆರೆಯ ರಾಜ್ಯಗಳಲ್ಲೂ ಶೋಧ ಕೈಗೊಂಡಿದ್ದರು.
ಅಧಿಕಾರಿಗಳು ಬೋಧಕ ಸೂರಜ್‌ಪಾಲ್ ಅಲಿಯಾಸ್ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಅವರನ್ನು ವಿಚಾರಣೆಗಾಗಿ ಹುಡುಕುತ್ತಿದ್ದಾರೆ. ಜುಲೈ 2 ರಂದು ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾ ಅವರ ಸತ್ಸಂಗದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಎಫ್‌ಐಆರ್‌ನಲ್ಲಿ ದೇವ್ ಪ್ರಕಾಶ್ ಮಧುಕರ್ ಅವರನ್ನು ಪ್ರಾಥಮಿಕ ಆರೋಪಿ ಎಂದು ಹೆಸರಿಸಲಾಗಿದ್ದು, ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಹೆಸರನ್ನು ಉಲ್ಲೇಖಿಸಿಲ್ಲ. ಹತ್ರಾಸ್‌ನಲ್ಲಿರುವ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.