ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಸಿಸೋಡಿಯಾಗೆ ಉತ್ತರ ಪ್ರದೇಶದ ಎಸ್‌ಸಿ/ಎಸ್‌ಟಿ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ರ ಅಡಿಯಲ್ಲಿ ಸಂದೀಪ್ ಅವರದು ನರಹತ್ಯೆಯ ಅಪರಾಧವೆಂದು ಪರಿಗಣಿಸಲಾಗಿದೆ.
ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳಾದ ರವಿ(35), ಲವ್ ಕುಶ್(23) ಮತ್ತು ರಾಮು (26) ಅವರನ್ನು ಖುಲಾಸೆಗೊಳಿಸಲಾಗಿದ್ದು, ಸಂದೀಪ್(20) ಮಾತ್ರ ಅಪರಾಧಿ ಎಂದು ಸಾಬೀತಾಗಿದೆ.
ಕೊಲೆಗೆ ಸಂಬಂಧಿಸಿದ ಆರೋಪಗಳು ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಸಂದೀಪ್ ವಿರುದ್ಧ ಉಳಿಯುತ್ತದೆ. ಆದರೆ, ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಕೈಬಿಡಲಾಗಿದೆ.
ಏನಿದು ಹತ್ರಾಸ್ ಪ್ರಕರಣ?
2020 ರ ಸೆಪ್ಟೆಂಬರ್‌ನಲ್ಲಿ ಪಶ್ಚಿಮ ಉತ್ತರ ಪ್ರದೇಶದ ಹತ್ರಾಸ್ ಪ್ರದೇಶದ ಬೂಲ್‌ಗರ್ಹಿಯಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಗಂಭೀರವಾಗಿ ಗಾಯಗೊಳಿಸಲಾಗಿತ್ತು. 15 ದಿನಗಳ ಜೀವನ್ಮರಣ ಹೋರಾಟದ ನಂತರ, ಸಂತ್ರಸ್ತೆ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪೊಲೀಸರು ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು.
ಅದೇ ಗ್ರಾಮದ ಮೇಲ್ವರ್ಗದ ನಾಲ್ವರು ಠಾಕೂರ್‌ಗಳು ಪ್ರಕರಣದ ಪ್ರತಿವಾದಿಗಳಾಗಿದ್ದು. ನ್ಯಾಯಾಲಯದ ತೀರ್ಪಿನಿಂದ ಅಸಮಾಧಾನಗೊಂಡಿರುವ ಬಾಲಕಿಯ ಕುಟುಂಬ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಿದೆ.