ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಯುವತಿ ಮೇಲೆ ನಾಲ್ವರು ಸವರ್ಣಿಯರು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಹತ್ರಾಸ್ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 3 ತಿಂಗಳ ನಂತರ ಆರೋಪ ಪಟ್ಟಿ ಸಲ್ಲಿಸಿದ್ದು, ಆರೋಪಿಗಳಾದ ಸಂದೀಪ್, ಲವಕುಶ್, ರವಿ ಮತ್ತು ರಾಮು ಅವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ.
ಮೊದಲು ಅತ್ಯಾಚಾರ ನಡೆದಿಲ್ಲ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದರು. ನಂತರ ಹೇಳಿಕೆ ಬದಲಿಸಿದ್ದರು. ಸೆಪ್ಟೆಂಬರ್ 14 ರಂದು ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದು, ತೀವ್ರ ಅಸ್ವಸ್ಥಳಾದ ಯುವತಿ ಸೆಪ್ಟೆಂಬರ್ 29 ರಂದು ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪೊಲೀಸರು ಕುಟುಂಬದವರಿಗೂ ತಿಳಿಸದೇ ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ಘಟನೆಯ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿ ಭಾರೀ ಪ್ರತಿಭಟನೆ ನಡೆಸಲಾಗಿತ್ತು.