ಹಾಸನ: ಸೊಸೆಗೆ ಲೈಂಗಿಕ ಕಿರುಕುಳ ನೀಡಿದ ಮಾವ ಕೊಲೆಯಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಬೀಗರು ಬಂಧಿತರಾಗಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿಕಾವಲು ಗ್ರಾಮದ ಕೆರೆ ಬಳಿ ನವೆಂಬರ್ 13ರಂದು ದೊಡ್ಡಹಳ್ಳಿ ತಮ್ಮೇಗೌಡನ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ತಮ್ಮೇಗೌಡನ ಬೀಗರನ್ನು ಬಂಧಿಸಿದ್ದಾರೆ. ವಿಕಲಚೇತನ ಮಗನಿಗೆ ಮದುವೆ ಮಾಡಿದ್ದ ತಮ್ಮೇಗೌಡ ಅಜ್ಜನಾಗುವ ಕನಸು ಕಂಡಿದ್ದ. ಆದರೆ, ಮೊಮ್ಮಕ್ಕಳು ಆಗದ ಕಾರಣ ವಂಶೋದ್ಧಾರ ಮಾಡಲು ಸೊಸೆಯೊಂದಿಗೆ ತಾನೇ ಮಲಗಲು ಮುಂದಾಗಿ ಸೊಸೆಗೆ ಕಿರುಕುಳ ನೀಡಿದ್ದಾನೆ.
ಈ ವಿಷಯವನ್ನು ತಿಳಿದ ಮಹಿಳೆಯ ಪೋಷಕರು ಚಂದ್ರೇಗೌಡ ಮತ್ತು ಯೋಗೇಶ ಎಂಬುವರಿಗೆ 50,000 ರೂ.ಗೆ ಕಲೊಲೆಗೆ ಸುಫಾರಿ ನೀಡಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಮೃತ ದೇಹವನ್ನು ಕೆರೆಗೆ ಎಸೆದು ಪರಾರಿಯಾಗಿದ್ದು, ಮೊಬೈಲ್ ಲೊಕೇಷನ್ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವಂಶೋದ್ಧಾರ ಮಾಡಲು ಹೋದ ಮಾವ ಸಾವು ಕಂಡಿದ್ದಾನೆ. ಮಗಳಿಗೆ ಮಾವ ಕಿರುಕುಳ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ಕೊಡುವ ಬದಲು ಸುಫಾರಿ ಕೊಟ್ಟ ಬೀಗರು ಜೈಲು ಸೇರಿದ್ದಾರೆ.