ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್ ಪಕ್ಷದ ಟಿಕೆಟ್ ಗಾಗಿ ಬಿಗ್ ಫೈಟ್ ನಡೆಯುತ್ತಿದ್ದು, ಟಿಕೆಟ್ ಗೊಂದಲ ನಿವಾರಣೆಗೆ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೊನೆಗೂ ಮಧ್ಯಪ್ರವೇಶಿಸಿದ್ದಾರೆ. ನಾಳೆ ನಿಗದಿಯಾಗಿದ್ದ ಸಭೆಯನ್ನೇ ದೇವೇಗೌಡರು ರದ್ದುಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ನಾಳೆ ಹಾಸನ ಕ್ಷೇತ್ರದ ಮುಖಂಡರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕರೆದಿದ್ದರು. ಹಾಸನ ಕ್ಷೇತ್ರದ 300 ಪ್ರಮುಖ ಮುಖಂಡರ ಸಭೆ ಕರೆದು ಅವರೊಂದಿಗೆ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ನೀಡಬೇಕೆಂದು ಚರ್ಚೆ ನಡೆಸಲಿದ್ದರು.
ನಾಳೆ ಸಭೆ ನಡೆದರೆ ಹಾಸನ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕರೆದಿದ್ದ ಸಭೆಯನ್ನು ದೇವೇಗೌಡರು ರದ್ದುಗೊಳಿಸಿದ್ದಾರೆ. ಒಂದು ವಾರದ ನಂತರ ತಾವೇ ಹಾಸನಕ್ಕೆ ಬಂದು ಗೊಂದಲ ಬಗೆಹರಿಸುವುದಾಗಿ ಹೇಳಿದ್ದಾರೆ. ಗೊಂದಲಕ್ಕೆ ತೆರೆ ಎಳೆಯುವುದಾಗಿ ಹೆಚ್.ಡಿ. ದೇವೇಗೌಡರು ಹೇಳಿದ್ದು, ನಾಳಿನ ಸಭೆಯನ್ನು ರದ್ದುಗೊಳಿಸಿದ್ದಾರೆ.
ನಾಳೆ ಸಭೆ ನಡೆಸುವ ಬಗ್ಗೆ ಇಂದು ದೇವೇಗೌಡರಿಗೆ ಹೆಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದರು ಎನ್ನಲಾಗಿದೆ. ನಾಳೆ ಸಂಜೆ 4:30 ಕ್ಕೆ ಜೆಪಿ ಭವನದಲ್ಲಿ ಹಾಸನದ ಜೆಡಿಎಸ್ ಪಕ್ಷದ 300 ಮುಖಂಡರ ಸಭೆ ಕರೆದಿದ್ದು, ಈ ಸಭೆಯನ್ನು ದೇವೇಗೌಡರು ರದ್ದುಪಡಿಸಿದ್ದಾರೆ ಎಂದು ಹೇಳಲಾಗಿದೆ.
ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಪರವಾಗಿ ಸಭೆ ಕರೆದ ಹಿನ್ನೆಲೆಯಲ್ಲಿ ಮತ್ತೊಂದು ಗುಂಪಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಗೊಂದಲಕ್ಕೆ ತೆರೆಗೆ ಎಳೆಯಲು ದೇವೇಗೌಡರು ಸಭೆ ರದ್ದುಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದು, ಈಗಾಗಲೇ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಹಾಸನ ಕ್ಷೇತ್ರದಲ್ಲಿ ನಿಲ್ಲಿಸುವುದಾಗಿ ಹೇಳಿದ್ದಾರೆ. ಇದರಿಂದ ಗೊಂದಲ ಉಂಟಾಗಿದ್ದು, ತಾವೇ ಹಾಸನಕ್ಕೆ ಬಂದು ಗೊಂದಲ ಬಗೆಹರಿಸುವುದಾಗಿ ದೇವೇಗೌಡರು ತಿಳಿಸಿ ಸಭೆಯನ್ನು ರದ್ದುಪಡಿಸಿದ್ದಾರೆ ಎನ್ನಲಾಗಿದೆ.