ಹಾಸನ: ಬೆಳೆಹಾನಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಂದ ಪರಿಹಾರ ಪೋರ್ಟಲ್ನಲ್ಲಿ ಅರ್ಜಿ ಪಡೆದು ರೈತರಿಗೆ ನೇರವಾಗಿ ಹಣ ವರ್ಗಾಯಿಸಲಾಗುವುದು ಎಂದು ಕಂದಾಯ ಸಚಿವ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಅಶೋಕ್ ಅವರು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ, ಮಳೆಹಾನಿ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ರಾಜ್ಯದ ಹಲವೆಡೆ ತೀವ್ರ ಮಳೆಗೆ ಬೆಳೆಗಳು ನೆಲಕಚ್ಚಿದೆ. ಆದ್ದರಿಂದ ಸಮೀಕ್ಷೆ ನಡೆಸುತ್ತಿದ್ದು, ಹಾಳಾಗಿರುವ ಬೆಳೆಯ ಪ್ರಮಾಣವನ್ನು ತಿಳಿದು ಶೀಘ್ರ ಕ್ರಮ ಕೈಗೊಳ್ಳುವ ಸಲುವಾಗಿ ಹಾಸನ ಜಿಲ್ಲೆಯ ಹಲವೆಡೆ ತಾವೇ ಪರೀಕ್ಷೆ ನಡೆಸುತ್ತಿರುವುದಾಗಿ ಹೇಳಿದರು.
ಕಳೆದ ಎರಡು ತಿಂಗಳಿಂದ ರಾಜ್ಯದ ಹಲವೆಡೆ ತೀವ್ರ ಮಳೆಗೆ ಬೆಳೆಗಳು ಹಾನಿಯಾಗಿರುವ ಕಂದಾಯ, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸುತ್ತಿದ್ದು, ನಷ್ಟದ ಅಂದಾಜು ವರದಿ ಪಡೆಯಲಾಗುತ್ತಿದೆ ಎಂದರು.
ರೈತರಿಗೆ ಅಧಿಕ ಪ್ರಮಾಣದಲ್ಲಿ ನಷ್ಟವಾಗಿದ್ದು, ಹೆಚ್ಚಿನ ಪ್ರಮಾಣದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸ್ಥಳೀಯ ಅಗತ್ಯಗಳಿಗನಿಗುಣವಾಗಿ ಅಧಿಕಾರಿಗಳು ತಕ್ಷಣವೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ವಿಕೋಪ ನಿರ್ವಹಣೆ ಕೋಶದ ಆಯುಕ್ತ ಡಾ.ಎಂ. ರಾಜನ್, ಜಿಲ್ಲಾಧಿಕಾರಿ ಆರ್. .ಗಿರೀಶ್, ಉಪ ವಿಭಾಗಾಧಿಕಾರಿ ಪ್ರತೀಕ್ ಬಾಯಲ್, ಬಿ.ಎ. ಜಗದೀಶ್, ಜಂಟಿ ಕೃಷಿ ನಿರ್ದೇಶಕ ರವಿ, ತೋಟಗಾರಿಕೆ ಉಪ ನಿರ್ದೇಶಕ ಯೋಗೇಶ್, ತಹಶೀಲ್ದಾರರಾದ ರೇಣುಕುಮಾರ್, ಕೃಷ್ಣ ಮೂರ್ತಿ, ಮಾರುತಿ ಮತ್ತಿತರರು ಹಾಜರಿದ್ದರು.