ಹಾಸನ: ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರ ಎದುರಲ್ಲೇ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ನಡೆಸಿದ ಘಟನೆ ಹಾಸನ ನಗರ ಠಾಣೆಯಲ್ಲಿ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಕಾನ್ಸ್ ಟೇಬಲ್ ವೇಣುಗೋಪಾಲ್ ಅವರ ಮೇಲೆ ಡಿವೈಎಸ್ಪಿ ಹಲ್ಲೆ ಮಾಡಿದ್ದು ಸ್ಥಳದಲ್ಲೇ ವೇಣುಗೋಪಾಲ್ ಕುಸಿದು ಬಿದ್ದಿದ್ದಾರೆ. ಹಾಸನ ಡಿವೈಎಸ್ಪಿ ಉದಯ ಭಾಸ್ಕರ್ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ನಿನ್ನೆ ಸಂಜೆ ಹಾಸನ ನಗರ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಭೇಟಿ ನೀಡಿದ್ದ ವೇಳೆಯಲ್ಲಿ ರೈಫಲ್ ಕ್ಲೀನ್ ಮಾಡಿ ತೋರಿಸುವಂತೆ ಡಿವೈಎಸ್ಪಿ ತಿಳಿಸಿದ್ದಾರೆ. ರೈಫಲ್ ಕ್ಲೀನ್ ಮಾಡುವಾಗ ತಪ್ಪು ಮಾಡಿದ್ದಕ್ಕೆ ಡಿವೈಎಸ್ಪಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಕಾನ್ಸ್ ಟೇಬಲ್ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹಾಸನ ಜಿಲ್ಲಾಸ್ಪತ್ರೆಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಭೇಟಿ ನೀಡಿ ವೇಣುಗೋಪಾಲ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಡಿವೈಎಸ್ಪಿ ಉದಯ ಭಾಸ್ಕರ್ ವಿರುದ್ಧ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿವೈಎಸ್ಪಿ ಉದಯ ಭಾಸ್ಕರ್ ರೌಡಿಗಳ ಗ್ಯಾಂಗ್ ಇಟ್ಟುಕೊಂಡಿದ್ದಾನೆ. ಆತನ ವಿರುದ್ಧ ಕೇಸು ದಾಖಲಿಸಿ ಸಸ್ಪೆಂಡ್ ಮಾಡಲಿ ಎಂದು ಹಾಸನ ಜಿಲ್ಲಾಸ್ಪತ್ರೆಯ ಬಳಿ ರೇವಣ್ಣ ಆಗ್ರಹಿಸಿದ್ದಾರೆ.