ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್ 2 ರಿಂದ ತೆರೆಯಲಿದ್ದು , ನವೆಂಬರ್ 2 ರಿಂದ ಭಕ್ತರಿಗೆ ‘ಹಾಸನಾಂಬೆ’ ದರ್ಶನ ಸಿಗಲಿದೆ.
ಹೌದು, ಈ ಸಂಬಂಧ ಇಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಅವರ ನೇತೃತ್ವದಲ್ಲಿ ಮಹತ್ವದ ಹಾಸನಾಂಬೆ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ನವೆಂಬರ್ 2 ರಿಂದ ನವೆಂಬರ್ 15ರವರೆಗೆ ಹಾಸನಾಂಬೆ ಮಹೋತ್ಸವ ನಡೆಸೋದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ದಿನ, ಅಂತಿಮ ದಿನದಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡೋದಿಲ್ಲ. ನಾಳೆಯಿಂದಲೇ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈ ಬಾರಿ ದಿನದ 24 ಗಂಟೆ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಇತಿಹಾಸ ಪ್ರಸಿದ್ಧ ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2ರಿಂದ ಪ್ರಾರಂಭವಾಗಲಿದೆ. ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ದರ್ಶನ ಪಡೆಯಲು ಅಧಿಕಾರಿಗಳಿ ಅಗತ್ಯ ಸಿದ್ಧತೆಗಳನ್ನು ಮಾಡಬೇಕು ಎಂದು ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ ನೀಡಿದರು, . 2023ರ ನವೆಂಬರ್ 2ರಿಂದ ನವೆಂಬರ್ 15ರವರೆಗೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನಡೆಯಲಿದ್ದು, 14 ದಿನಗಳ ಕಾಲ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ . ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಜನರು ಆಗಮಿಸುತ್ತಾರೆ. ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ದೇಗುಲದ ಬಾಗಿಲ ಪುರ ಪ್ರಮುಖರಾದ ತಹಸಿಲ್ದಾರರು/ ಕಮೀಷನರ್ ಶಾಸಕರು ಮುಂತಾದವರ ಸಮ್ಮುಖದಲ್ಲಿ ತೆರೆಯಲಾಗುತ್ತದೆ.