ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದಲ್ಲಿ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ತೆರೆ ಬೀಳಲಿದೆ.
ಸಂಪ್ರದಾಯದಂತೆ ಭಾನುವಾರ ದೇವಾಲಯದ ಬಾಗಿಲು ಮುಚ್ಚಲಾಗುವುದು. ಈ ವರ್ಷ ಅಕ್ಟೋಬರ್ 24ರಂದು ಮಧ್ಯಾಹ್ನ 12 15ಕ್ಕೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಪರಂಪರೆಗೆ ಅನುಗುಣವಾಗಿ ತೆರೆಯಲಾಯಿತು. ಅಂದಿನಿಂದಲೂ ದರ್ಶನಕ್ಕೆ ಭಾರಿ ಸಂಖ್ಯೆಯ ಭಕ್ತರು ಆಗಮಿಸತೊಡಗಿದ್ದಾರೆ.
ಮೊದಲೆರಡು ದಿನ ಭಕ್ತರು ನೆಮ್ಮದಿಯಿಂದ ದರ್ಶನ ಪಡೆದರು. ಮೂರನೇ ದಿನದಿಂದ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸಿದ್ದರಿಂದ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿ ಗೊಂದಲ ಉಂಟಾಗಿತ್ತು. ಬಳಿಕ ಜಿಲ್ಲಾಡಳಿತ ಸುಗಮ ದರ್ಶನಕ್ಕೆ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದೆ. ದರ್ಶನಕ್ಕೆ ಇಂದು ಕೊನೆಯ ದಿನವಾಗಿದ್ದು, ನಾಳೆ ದೇವಾಲಯದ ಬಾಗಿಲು ಮುಚ್ಚಲಾಗುವುದು.