ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬ ದೇವಿ ದರ್ಶನ ನವೆಂಬರ್ 2ರಿಂದ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಸಂಪ್ರದಾಯದಂತೆ ದೇವಾಲಯದ ಗರ್ಭಗುಡಿ ಬಾಗಿಲು ತೆಗೆಯಲಾಗುವುದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದ್ದಾರೆ.
ಹಾಸನಾಂಬ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಾರಿ ಯಾರೇ ಗಣ್ಯರು ಬಂದರೂ, ಅರ್ಚನೆ ಇರುವುದಿಲ್ಲ. ದೇವಿ ದರ್ಶನವನ್ನು ಎರಡು ನಿಮಿಷದೊಳಗೆ ಮುಗಿಸಬೇಕು ಎಂದು ಹೇಳಿದ್ದಾರೆ. ನ. 2ರಂದು ದೇವಾಲಯದ ಬಾಗಿಲು ತೆರೆಯಲಿದ್ದು, ನವೆಂಬರ್ 15 ರಂದು ಮುಚ್ಚಲಾಗುವುದು ಎಂದು ಹೇಳಿದ್ದಾರೆ.
ಹಾಸನಾಂಬ ದೇವಾಲಯದ ಬಾಗಿಲು ತೆರೆಯುವ ಮತ್ತು ಮುಚ್ಚುವ ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಕ್ತಿ ಯೋಜನೆಯ ಕಾರಣ ಈ ಬಾರಿ ಹಾಸನಾಂಬ ದೇವಿ ದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಬರುವ ನಿರೀಕ್ಷೆ ಇದೆ. ಕಳೆದ ವರ್ಷ 6 ಲಕ್ಷ ಜನ ಆಗಮಿಸಿದ್ದರು ಎಂದು ಹೇಳಿದ್ದಾರೆ.
ದೇವಿಯ ಪೂಜೆಯನ್ನು ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. ವಿಶೇಷ ದರ್ಶನಕ್ಕೆ 300 ರೂ., 1 ಸಾವಿರ ರೂ.ಗಳ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಮಾರುತಿ ಹೇಳಿದ್ದಾರೆ.