
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ದಿನೇ ದಿನೇ ಭಕ್ತರ ಸಂಖ್ಯೆ ಭಾರಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನೈವೇದ್ಯದ ಸಮಯವನ್ನು ಕಡಿತಗೊಳಿಸಿ ದರ್ಶನದ ಸಮಯವನ್ನು ರಾತ್ರಿ 12 ಗಂಟೆವರೆಗೆ ವಿಸ್ತರಿಸಲಾಗಿದೆ.
ಪ್ರತಿದಿನ ಮಧ್ಯಾಹ್ನ ಒಂದು ಗಂಟೆಯಿಂದ 3:30ರ ವರೆಗೆ ನೈವೇದ್ಯ ಸಮಯ ನಡೆಯುತ್ತಿದ್ದು, ಇದನ್ನು ಒಂದು ಗಂಟೆಗೆ ಕಡಿತಗೊಳಿಸಲು ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಅರ್ಚನಾ ಮತ್ತು ಎಸ್.ಪಿ. ಹರಿರಾಮ ಶಂಕರ್ ಅವರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ. ಪ್ರತಿದಿನ ರಾತ್ರಿ 10 ಗಂಟೆಗೆ ಬಾಗಿಲು ಹಾಕುವ ಬದಲು 12 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ.