ಹಾಸನ: ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸುವಂತೆ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ-2024 ಆ್ಯಪ್, ಪೊಸ್ಟರ್ ಬಿಡುಗಡೆ ಮಾಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಹಾಸನಾಂಬ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಸುಗಮ ದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಕ್ಟೋಬರ್ 24 ರಂದು ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಾಗುವುದು. ನ. 3ರವರೆಗೂ ಜಾತ್ರಾ ಮಹೋತ್ಸವ ಜರುಗಲಿದೆ. ಒಟ್ಟು 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಕಳೆದ ಬಾರಿಗಿಂತ ನಾಲ್ಕು ಲಕ್ಷ ಹೆಚ್ಚು ಭಕ್ತರು ಆಗಮಿಸುವುದರೊಂದಿಗೆ ಸುಮಾರು 20 ಲಕ್ಷ ಭಕ್ತರ ಆಗಮನ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.
ದರ್ಶನೋತ್ಸವ ಪ್ರಾರಂಭವಾಗುವ ಅ. 24ರಂದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿರುವವರು. ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇವರ ಬಾಗಿಲನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಮೈಸೂರು ದಸರಾದಂತೆ ವಿದ್ಯುತ್ ಅಲಂಕಾರ, ಹೂವಿನ ಅಲಂಕಾರಕ್ಕೆ ಕ್ರಮವಹಿಸಿ ಸಣ್ಣ ಪುಟ್ಟ ಲೋಪದೋಷಗಳು ಆಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬೇಲೂರು-ಹಳೇಬೀಡಿನಲ್ಲಿ ಯಾತ್ರಿಕರಿಗೆ ಅನುಕೂಲವಾಗುವಂತೆ ಶೌಚಾಲಯ ವ್ಯವಸ್ಧೆಗೆ ಕ್ರಮವಹಿಸಲು ಸೂಚಿಸಿದರು.
ಫಲ ಪುಷ್ಪ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಅಗತ್ಯ ಸಿದ್ದತೆಗೆ ಕ್ರಮವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಹೆಚ್ಚಿನ ಪ್ರಚಾರ ನೀಡಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಣೆ ಮಾಡುವಂತೆ ಕ್ರಮವಹಿಸಿ ಎಂದು ತಿಳಿಸಿದರು.
ವಿದ್ಯುತ್ ಅಲಂಕಾರ, ಹೂವಿನ ಅಲಂಕಾರ, ಸ್ವಾಗತ ಕಮಾನು, ಸಂಚಾರ ನಿಯಂತ್ರಣ, ಶೌಚಾಲಯ ನಿರ್ಮಾಣ, ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಉಪ ವಿಭಾಗಾಧಿಕಾರಿ ಮಾರುತಿ ಮಾಹಿತಿ ನೀಡಿದರು. ಹೂವಿನ ಅಲಂಕಾರಕ್ಕೆ ಈ ಬಾರಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪುಷ್ಪಲಂಕಾರ ಆಯೋಜನೆ ಮಾಡುವ ಆಯೋಜಕರಿಗೆ ನೇಮಿಸಲಾಗಿದ್ದು, ,ಈ ಬಾರಿ 80 ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಅಲಂಕಾರಕ್ಕೆ ದಸರಾ ಮಾದರಿ ದೀಪಾಲಂಕಾರ ಮಾಡಲು ಟೆಂಡರ್ ಕರೆಯಲಾಗಿದೆ.
ಈ ಬಾರಿ 1000 ಹಾಗೂ 300 ರೂ. ವಿಶೇಷ ದರ್ಶನದ ಪಾಸ್ ಗಳಿಗೆ ಲಾಡು ಪ್ರಸಾದ ನೀಡುವ ಕುರಿತು ತಿರ್ಮಾನಿಸಿ, ವಿಶೇಷ ದರ್ಶನದ 1000 ರೂ. ಪಾಸಿಗೆ ಎರಡು ಹಾಗೂ 300 ರೂ ಪಾಸ್‌ಗೆ ಒಂದು ಲಾಡನ್ನು ನೀಡಲು ನಿರ್ಧರಿಸಲಾಗಿದೆ. ವಿಶೇಷವಾಗಿ ಈ ಬಾರಿ ಇಸ್ಕಾನ್ ಸಂಸ್ಥೆಯಿಂದ ಲಾಡು ಪ್ರಸಾದ ತಯಾರಿಕೆಗೆ ಕ್ರಮ ಕೈಗೊಳ್ಳಲಾಗಿದೆ. ದರ್ಶನೋತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ದೊನ್ನೆ ಪ್ರಸಾದ ವಿತರಣೆ ಆಗಲಿದ್ದು, ಪ್ರತಿ ಮೂರು ಗಂಟೆಗೆ ಒಮ್ಮೆ ಪ್ರಸಾದ ಬದಲಿಸಲಾಗುವುದು. ಪುಳಿಯೋಗರೆ, ಪಲಾವ್, ಪೊಂಗಲ್ ಸೇರಿದಂತೆ ನಾನಾ ಬಗೆಯ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾರುತಿ ತಿಳಿಸಿದರು.
ಕಳೆದ ಬಾರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಪ್ರವಾಸದ ಪ್ಯಾಕೇಜ್ ಅನ್ನು ಪರಿಚಯಿಸಲಾಗಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಾರಿಯೂ ಅದೇ ರೀತಿ ಪ್ಯಾಕೇಜ್ ಟೂರ್ ಅನ್ನು ಪರಿಚಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.
ಹೆಲಿಕಾಪ್ಟರ್ ಮೂಲಕ ಹಾಸನ ನಗರ ಹಾಗೂ ಹಾಸನಾಂಬ ದೇವಾಲಯ ಸುತ್ತ ಪ್ರಯಾಣ ಮಾಡಲು ಈ ಬಾರಿಯೂ ಅವಕಾಶ ಕಲ್ಪಿಸಲಾಗುವುದು ಎಂದು ಡಿಸಿ ಹೇಳಿದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿದರು. ಸಂಸದ ಶ್ರೇಯಸ್ ಪಟೇಲ್, ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು.