ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಲಕ್ಷಾಂತರ ಮಂದಿ ಆಗಮಿಸತೊಡಗಿದ್ದಾರೆ. ಕಳೆದ ಮೂರು ದಿನದ ಅವಧಿಯಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದು, ಟಿಕೆಟ್ ರೂಪದಲ್ಲಿ ಮೂರು ಕೋಟಿ ರೂಪಾಯಿ ಆದಾಯ ಬಂದಿದೆ.
ಅ. 24ರಂದು ಹಾಸನಾಂಬ ದೇವಾಲಯ ಬಾಗಿಲು ತೆರೆಯಲಾಗಿದ್ದು, ಅ. 25ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 11 ದಿನಗಳ ಕಾಲ ದೇವಾಲಯದ ಬಾಗಿಲು ತೆರೆದರೂ ಮೊದಲ ದಿನ ಮತ್ತು ಅಂತಿಮ ದಿನವಾದ ನವೆಂಬರ್ 3ರಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. 9 ದಿನದೊಳಗೆ ದರ್ಶನ ಮಾಡಬೇಕಿದೆ.
ರೈಲು, ಬಸ್, ಬಾಡಿಗೆ, ಸ್ವಂತ ವಾಹನದಲ್ಲಿ ರಾಜ್ಯ, ಹೊರ ರಾಜ್ಯವಲ್ಲದೇ, ವಿದೇಶದಿಂದಲೂ ಭಕ್ತರು ಆಗಮಿಸಿ, ಹಾಸನಾಂಬೆ ದರ್ಶನ ಪಡೆಯತೊಡಗಿದ್ದಾರೆ. ವಾರಾಂತ್ಯ ದಿನವಾದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಾಂಬೆ ದರ್ಶನಕ್ಕೆ ಆಗಮಿಸಲಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಹೆಲಿಕಾಪ್ಟರ್ ನಲ್ಲಿ ಭುವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಹಾಸನ ದೇವಿ ದರ್ಶನ ಪಡೆದು ಬಳಿಕ ಬೆಂಗಳೂರಿಗೆ ತೆರಳಲ್ಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ.