alex Certify BIG NEWS: ಅಕ್ಟೋಬರ್ 24 ರಿಂದ ‘ಹಾಸನಾಂಬ ಜಾತ್ರಾ ಮಹೋತ್ಸವ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಕ್ಟೋಬರ್ 24 ರಿಂದ ‘ಹಾಸನಾಂಬ ಜಾತ್ರಾ ಮಹೋತ್ಸವ’

ಹಾಸನದ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಸಂಸದರಾದ ಶ್ರೇಯಸ್ ಪಟೇಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಹಾಸನಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಸರ ರೀತಿಯಲ್ಲಿ ದೀಪಾಲಂಕಾರ ಮಾಡಲು ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಮೂರು ದಿನ ಮುಂಚಿತವಾಗಿ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಾಗಿಲು ತೆರೆದ ದಿನ ನೂಕುನುಗ್ಗಲು ಆಗದಂತೆ ಶಿಷ್ಠಾಚಾರ ಪಾಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಜ್ಯದ ಮೂಲೆಮೂಲೆಗಳಿಂದ ಬರುವ ಭಕ್ತಾಧಿಗಳು ದೇವಿ ದರ್ಶನ ಪಡೆಯಲು ಯಾವುದೇ ತೊಂದರೆಯಾಗದಂತೆ ಅನುಕೂಲ ಕಲ್ಪಿಸಬೇಕು ಎಂದರಲ್ಲದೆ, ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

1000 ರೂ. 300 ರೂ. ಟಿಕೆಟ್ ಪಡೆದು ದೇವಿ ದರ್ಶನ ಮಾಡುವ ಭಕ್ತಾದಿಗಳಿಗೆ ಲಡ್ಡು ಪ್ರಸಾದ ನೀಡುವುದರ ಜೊತೆಗೆ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು.

ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಮಾತನಾಡಿ ನಗರದ ರಸ್ತೆಗಳ ಗುಂಡಿ ಮುಚ್ಚಲು ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಜಾತ್ರಾ ಸಂದರ್ಭದಲ್ಲಿ ಸ್ವಚ್ಚತೆಗಾಗಿ ಹಾಲಿ ನಗರ ಸಭೆಯ ಪೌರ ಕಾರ್ಮಿಕರ ಜೊತೆಗೆ ಇನ್ನೂ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪ್ರತ್ಯೇಕ ಟೆಂಡರ್ ಕರೆಯುವಂತೆ ತಿಳಿಸಿದರು.

ಹಾಸನಾಂಬ ದೇವಾಲಯದ ಗರ್ಭ ಗುಡಿಯ ಬಾಗಿಲಿಗೆ ರಜತ ಕವಚ ಅಳವಡಿಸಲು ಕ್ರಮವಹಿಸಲು ತಿಳಿಸಿದರಲ್ಲದೆ, ದನದ ಜಾತ್ರೆ ಆಯೋಜನೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಕಳೆದ ಬಾರಿಗಿಂತ ವೈಭವದಿಂದ ವಿಜ್ರಂಭಣೆಯಿಂದ ಆಚರಣೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಮೆರುಗು ತರುವಂತೆ ಕ್ರಿಕೆಟ್ ಕ್ರೀಡಾಕೂಟ-ಹಾಸನಾಂಬ ಕಪ್, ಭಕ್ತಾದಿಗಳು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಕೆ.ಎಸ್.ಆರ್.ಟಿ.ಬಸ್ ಗಳ ಮೂಲಕ ಪ್ಯಾಕೇಜ್ ಟೂರ್, ಹಾಸನ ಬೈ ಸ್ಕೈ, ಪ್ಯಾರಾ ಗ್ಲೈಂಡಿಂಗ್, ಪ್ಯಾರಾ ಮೋಟರಿಂಗ್, ಹಾಟ್ ಬಲೂನ್, ವಿಹಾರ ಧಾಮದಲ್ಲಿ ಬೋಟಿಂಗ್ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್ 24 ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುವುದು ನವೆಂಬರ್ 3 ರಂದು ಬಾಗಿಲು ಮುಚ್ಚಲಾಗುವುದು. ಅ.24 ಮತ್ತು ನ.3 ರಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಾಲ್ಕು ಸಾರ್ವತ್ರಿಕ ರಜೆಗಳು ಬರುವುದರಿಂದ ಸಾರ್ವಜನಿಕರು ದೇವಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಧರ್ಮ ದರ್ಶನದಲ್ಲಿ ದರ್ಶನಕ್ಕೆ ಹೆಚ್ಚು ಸಮಯ ನಿಲ್ಲದೆ ದರ್ಶನಕ್ಕೆ ಅನುಕೂಲವಾಗುವಂತೆ ಎರಡು ದಿನ ಪಾಸ್‌ಗಳಿಗೆ ಅವಕಾಶ ನೀಡದಿದ್ದರೆ ಸಾರ್ವಜನಿಕ ದರ್ಶನಕ್ಕೆ ಸಹಕಾರಿಯಾಗುತ್ತದೆ ಎಂದು ಆಡಳಿತಾಧಿಕಾರಿ ಅವರು ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಮಾತನಾಡಿ ಹಾಸನಾಂಬ ಜಾತ್ರಾ ಸಂದರ್ಭದಲ್ಲಿ ಪುಷ್ಪಾಂಲಕಾರಕ್ಕಾಗಿ ನಾಳೆ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...