
ಹಾಸನ: ಹಾಸನಾಂಬೆ ದೇಗುಲದಲ್ಲಿ 9ನೇ ದಿನವಾದ ಇಂದು ಜನಸಾಗರವೇ ಹರಿದು ಬಂದಿದ್ದು, ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಕಾಯುತ್ತಿದ್ದ ಭಕ್ತರು ಸಹನೆ ಕಳೆದುಕೊಂಡು ಪೊಲೀಸರನ್ನೇ ತಳ್ಳಿ ಒಳ ನುಗ್ಗಿದ್ದಾರೆ.
ಹಾಸನಾಂಬೆ ದೇವಿ ದರ್ಶನಕ್ಕಾಗಿ ಎರಡು ಕಿ.ಮೀವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಲಕ್ಷಾಂತರ ಭಕ್ತರು ದೇವಾಲಯಕ್ಕೆ ಹರಿದು ಬಂದಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು, ಜಿಲ್ಲಾಡಳಿತ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಮಧ್ಯಾಹ್ನವಾದರೂ ದೇವಾಲಯದ ಮುಖ್ಯದ್ವಾರವನ್ನೂ ಪ್ರವೇಶಿಸಲಾಗದೇ ಭಕ್ತರು ಸಾಲಿನಲ್ಲಿಯೇ ನಿಂತು ನಿಂತು ಸುಸ್ತಾಗಿದ್ದಾರೆ. ಈ ವೇಳೆ ಶಾಸಕ ಮಂಜು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದು, ಶಾಸಕರ ಕುಟುಂಬ ಎಂದು ಪೊಲೀಸರು ಹೇಳುತ್ತಿದ್ದಂತೆ ಸಹಾಯಕ ಆಯುಕ್ತೆ ಶಿಲ್ಪಾ ಮುಖ್ಯದ್ವಾರದ ಗೇಟ್ ತೆರೆದು ಒಳಗೆ ಬಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕರ ಹಿಂದೆಯೇ ನೂರಾರು ಭಕ್ತರು ಏಕಾಏಕಿ ಗೇಟ್ ಒಳಗೆ ನುಗ್ಗಿದ್ದಾರೆ.
ಈ ವೇಳೆ ಸಹಾಯಕ ಆಯುಕ್ತೆ ಶೃತಿ ವಿರುದ್ಧ ಗರಂ ಆದ ಜಿಲ್ಲಾಧಿಕಾರಿ ಸತ್ಯಭಾಮ ಹೀಗೇಕೆ ಮಾಡುತ್ತಿದ್ದೀರಿ? ಬೆಳಿಗ್ಗೆಯಿಂದಲೂ ಜನರು ಕಾಯುತ್ತಿಲ್ಲವೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಎಸಿ ಶಿಲ್ಪಾ, ಶಾಸಕರ ಕುಟುಂಬ ಎಂದು ಹೇಳಿದ್ದಕ್ಕೆ ಗೇಟ್ ತೆಗೆಯಲಾಗಿತ್ತು. ಅಷ್ಟರಲ್ಲಿ ಎಲ್ಲರೂ ಬಂದಿದ್ದಾರೆ ಎನ್ನುತ್ತಿದ್ದಂತೆ ಸಿಟ್ಟಾದ ಜಿಲ್ಲಾಧಿಕಾರಿ ಸುಮ್ಮನಿರ್ರೀ..ಎಂದು ಎಸಿ ಕೈಗೆ ಹೊಡೆದಿದ್ದಾರೆ. ಡಿಸಿ ವರ್ತನೆಗೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.