ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದಲ್ಲಿ ಎಂಟನೇ ದಿನವಾದ ಗುರುವಾರ ರಾಜ್ಯದ ವಿವಿಧ ಕಡೆಯಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಏಳೆಂಟು ಗಂಟೆ ಕಾದರೂ ದರ್ಶನ ಸಾಧ್ಯವಾಗಿಲ್ಲ. ಇದರಿಂದಾಗಿ ಜಿಲ್ಲಾಡಳಿತ ಮತ್ತು ವಿಶೇಷ ಪಾಸುಗಳ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಕೊನೆಗೆ ಭಕ್ತರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ಎಲ್ಲಾ ಪಾಸುಗಳನ್ನು ರದ್ದು ಮಾಡಿ ಧರ್ಮದರ್ಶನಕ್ಕೆ ಮಾತ್ರ ಅವಕಾಶ ನೀಡಿದೆ.
ಈ ವರ್ಷ ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರಿಂದ ಸುಗಮದರ್ಶನಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಹರಸಾಹಸ ನಡೆಸಿದೆ. ಧರ್ಮದರ್ಶನದ ಸಾಲು 3 ಕಿ.ಮೀ.ವರೆಗೂ ಇದ್ದು, ಇನ್ನು ವಿಐಪಿ, ವಿವಿಐಪಿ, ಒಂದು ಸಾವಿರ ರೂಪಾಯಿಯ ವಿಶೇಷ ಪಾಸ್, ಮತ್ತಿತರ ಪಾಸುಗಳನ್ನು ಹೊಂದಿದವರ ಸಾಲಿನಲ್ಲಿಯೂ ಉದ್ದನೆಯ ಕ್ಯೂ ಇತ್ತು.
ಈ ಬಾರಿ 20 ಲಕ್ಷ ಮಂದಿ ಹಾಸನಾಂಬ ದೇವಿಯ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ಅದಕ್ಕಿಂತಲೂ ಹೆಚ್ಚು ಜನ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಗೊಂದಲ ಉಂಟಾಯಿತು. ಜನರನ್ನು ನಿಯಂತ್ರಿಸುವುದೇ ಸವಾಲಾಗಿ ಪರಿಣಮಿಸಿದ್ದು, ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿರುವ ವಿಐಪಿ ಪಾಸ್ ಗಳಿಂದ ಜಿಲ್ಲಾಡಳಿತ ಆಕ್ರೋಶಕ್ಕೆ ಗುರಿಯಾಗಿ ಕೊನೆಗೆ ಪಾಸ್ ಗಳನ್ನು ರದ್ದು ಮಾಡಲಾಗಿದೆ.