
ನವದೆಹಲಿ: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಜಣ್ಣ, ಸದ್ಯ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ನಡುವೆ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಾಸನ ಉಸ್ತುವಾರಿ ಸ್ಥಾನದಿಂದ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ, ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಎಂದರು.
ನಾನು ಪಕ್ಷ ಸಂಘಟನೆಯತ್ತ ಗಮನ ಕೊಡಬೇಕಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲಸ ಮಾಡಬೇಕಿದೆ. ಬೇರೆ ಯಾವ ಜಿಲ್ಲೆಗೂ ಕಾಂಗ್ರೆಸ್ ಉಸ್ತುವಾರಿ ಸ್ಥಾನ ನೀಡಿ ಎಂದು ನಾನು ಕೇಳಲ್ಲ. ಹಾಸನದಲ್ಲಿ ಲೋಕಸಭಾ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಇತ್ತು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೆ. ಈಗ ಹಾಸನ ಉಸ್ತುವಾರಿಯಿಂದ ನನ್ನ ಬಿಡುಗಡೆ ಮಾಡುವಂತೆ ಮನವಿ ಮಡಿದ್ದೇನೆ ಎಂದು ಹೇಳಿದರು.