ಹಾಸನ: ಸರ್ಕಾರಿ ಶಾಲೆಯ ವಸತಿ ನಿಲಯದ ಮಕ್ಕಳು ಅಮಲಿನಲ್ಲಿ ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳು ಮದ್ಯಪಾನ, ಧೂಮಪಾನ ಮಾಡುತ್ತಿದ್ದು, ನಶೆಯಲ್ಲಿ ತೇಲಾಡುತ್ತಿರುವ ವಿದ್ಯಾರ್ಥಿಗಳ ಸ್ಥಿತಿ ಆತಂಕವನ್ನುಂಟುಮಾಡುತ್ತಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡಿಯ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಹಾಸ್ಟೇಲ್ ನಲ್ಲಿ ಸಿಬ್ಬಂದಿಗಳಿಲ್ಲದ ವೇಳೆ ಈರೀತಿ ಬೀಡಿ, ಸಿಗರೇಟ್ ಸೇದಿ, ಮದ್ಯಪಾನ ಮಾಡಿ ಅಮಲಿನಲ್ಲಿ ತೇಲುತ್ತಿದ್ದಾರೆ.
ನಾಲ್ಕೈದು ಮಕ್ಕಳು ವೈಟ್ನರ್ ಮೂಸುತ್ತಾ ಗುಂಗಾಗುತ್ತಿದ್ದರೆ, ಇನ್ನು ಕೆಲ ಮಕ್ಕಳು ಧೂಮಪಾನ ಮಾಡುತ್ತಿದ್ದಾರೆ. ವಸತಿ ನಿಲಯದ ಟೆರೇಸ್ ಮೇಲೆ ಮದ್ಯದ ಬಾಟಲಿಗಳ ರಾಶಿಯೇ ಬಿದ್ದಿದೆ. ಮಕ್ಕಳು ಡ್ರಗ್ಸ್ ಹಾಗೂ ಗಾಂಜಾ ಸೇವನೆ ಮಾಡುತ್ತಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
ಸರ್ಕಾರಿ ವಸತಿ ಶಾಲೆ ವಿದ್ಯಾರ್ಥಿಗಳು ನಶೆ ಲೋಕದಲ್ಲಿ ತೇಲುತ್ತಿದ್ದರೂ ಈ ಬಗ್ಗೆ ವಸತಿ ನಿಲಯದ ಸಿಬ್ಬಂದಿಗಳಾಗಲಿ, ಶಾಲೆಯ ಆಡಳಿತ ಮಂಡಳಿಯಾಗಲಿ ಕಿಂಚಿತ್ತೂ ಗಮನ ಹರಿಸಿದಂತೆ ಇಲ್ಲ. ಚನ್ನಾಗಿ ಓದಿ ಉತ್ತಮ ನಾಗರಿಕರಾಗಲೆಂದು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸರ್ಕಾರಿ ಶಾಲೆಯ ವಸತಿ ನಿಲಯದ ಮಕ್ಕಳೇ ಈ ರೀತಿ ದಾರಿ ತಪ್ಪುತ್ತಿದ್ದಾರೆ. ಅಷ್ಟಕ್ಕೂ ಮಕ್ಕಳ ಕೈಗೆ ಅಮಲಿನ ವಸ್ತುಗಳು ಸುಲಭವಾಗಿ ಸುಗುತ್ತಿರುವುದಾದರೂ ಹೇಗೆ? ಮಕ್ಕಳ ಭವಿಷ್ಯ ಹಾಳಾಗುತ್ತಿದ್ದರೂ ಹಾಸ್ಟೇಲ್ ವಾರ್ಡನ್, ಸಿಬ್ಬಂದಿ ಕಣ್ಮುಚ್ಚಿ ಕುಳಿತಿರುವುದಾದರೂ ಯಾಕೆ? ಎಂದು ಸ್ಥಳೀಯರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.