ಭಾರತದ ವಿರುದ್ಧ ಪಾಕಿಸ್ತಾನ ರಹಸ್ಯ ಯುದ್ಧ ಆರಂಭಿಸಿದೆಯೇ ಎಂಬ ಪ್ರಶ್ನೆ ಈಗ ಶುರುವಾಗಿದೆ. ಇದಕ್ಕೆ 600 ಪಾಕ್ ಎಸ್‌ಎಸ್‌ಜಿ ಕಮಾಂಡೋಗಳು ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದ್ದಾರೆ ಎಂಬ ಸುದ್ದಿ ಕಾರಣವಾಗಿದೆ. ಸಾಮಾಜಿಕ ಜಾಲತಾಣ X ನಲ್ಲಿನ ಕಾಶ್ಮೀರಿ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಪೋಸ್ಟ್ ಆತಂಕಕ್ಕೆ ಕಾರಣವಾಗಿದೆ.
ಮಿರ್ಜಾ ಸಂದರ್ಶನದ ಪೋಸ್ಟ್ ವೈರಲ್ ಆಗಿದೆ. ಅದ್ರಲ್ಲಿ ಪಾಕಿಸ್ತಾನದ ಎಸ್ ಎಸ್ ಜಿ ಜನರಲ್ ಆಫೀಸರ್ ಕಮಾಂಡಿಂಗ್ ನ ಮೇಜರ್ ಜನರಲ್ ಆದಿಲ್ ರಹಮಾನಿ ಮುಜಫರಾಬಾದ್‌ನಿಂದ ಸಂಘಟಿತ ದಾಳಿಯನ್ನು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಮಿರ್ಜಾ ಪ್ರಕಾರ, ಸುಮಾರು 600 ಎಸ್ ಎಸ್ ಜಿ ಕಮಾಂಡೋಗಳು ಕುಪ್ವಾರಾ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಿಗೆ ನುಸುಳಿದ್ದಾರೆ. ಈ ಮಹತ್ವದ ಸೇನಾ ಚಟುವಟಿಕೆಯು ಸ್ಥಳೀಯ ಜಿಹಾದಿ ಸ್ಲೀಪರ್ ಸೆಲ್‌ಗಳನ್ನು ಅವರ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಲಿವೆ. ಮುಜಫರಾಬಾದ್‌ನಲ್ಲಿ ಇನ್ನೂ ಎರಡು ಎಸ್ ಎಸ್ ಜಿ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತ ಪ್ರವೇಶಿಸಲು ಅವು ಸಿದ್ಧವಾಗಿವೆ ಎಂದು ಮಿರ್ಜಾ ಹೇಳಿದ್ದಾನೆ.
ಪಿರ್ ಪಂಜಾಲ್ ಬೆಟ್ಟಗಳಲ್ಲಿ ಕಾರ್ಗಿಲ್ ಯುದ್ಧದ ರೀತಿಯ ಸಂಘರ್ಷ ಸ್ಫೋಟಗೊಳ್ಳಬಹುದು. ಕಾರ್ಗಿಲ್ ಯುದ್ಧದ ಸಮಯದಲ್ಲಿ, ಸರಿಸುಮಾರು 5,000 ಪಾಕಿಸ್ತಾನಿ ಸೈನಿಕರು ಭಾರತದ ಭೂಪ್ರದೇಶವನ್ನು ದಾಟಿದರು, ಇದು 62 ದಿನಗಳ ತೀವ್ರ ಹೋರಾಟಕ್ಕೆ ಕಾರಣವಾಯಿತು. ಭಾರತವು ಅಂತಿಮವಾಗಿ ಕಾರ್ಗಿಲ್ ಶಿಖರಗಳ ಮೇಲೆ ಹಿಡಿತ ಸಾಧಿಸಿತು, ಆದರೆ ಯುದ್ಧದಲ್ಲಿ 527 ಭಾರತೀಯ ಸೈನಿಕರು ವೀರ ಮರಣ ಹೊಂದಿದರು. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವ್ಯಾಪಿಸಿರುವ ಪಿರ್ ಪಂಜಾಲ್ ಶ್ರೇಣಿಯು ಭಯೋತ್ಪಾದಕರು ಮತ್ತು ಪಾಕಿಸ್ತಾನದ ಸೇನೆಗೆ ಕಾರ್ಯತಂತ್ರದ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಪ್ರದೇಶದ ದಟ್ಟವಾದ ಕಾಡುಗಳು, ಕಡಿದಾದ ಇಳಿಜಾರುಗಳು ಮತ್ತು ಹಲವಾರು ಗುಹೆಗಳು ಈ ಪಡೆಗಳಿಗೆ ಸಾಕಷ್ಟು ಸಹಾಯ ಮಾಡ್ತಿವೆ ಎಂದು ಅವರು ಸಂದರ್ಶನವೊಂದರಲ್ಲೂ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಅವರು ಎಕ್ಸ್‌ನಲ್ಲಿರುವ ಮಿರ್ಜಾ ವೀಡಿಯೊವನ್ನು ಬೆಂಬಲಿಸಿದ್ದಾರೆ. ಇದೇ ಸಂಬಂಧ ಅವರು ಮಾತನಾಡಿದ ವಿಡಿಯೋ ಕೂಡ ಈಗ ಚರ್ಚೆಗೆ ಕಾರಣವಾಗಿದೆ.