ನವದೆಹಲಿ: ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರ ಉಪಸ್ಥಿತಿಯಲ್ಲಿ ವೇದಿಕೆಯ ಮೇಲೆ ಮಹಿಳಾ ನಾಯಕಿಗೆ ಪಕ್ಷದ ಮುಖಂಡರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಹರಿಯಾಣ ಚುನಾವಣೆ ರ್ಯಾಲಿಯ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯೊಂದಿಗೆ ಪಕ್ಷದ ಮುಖಂಡರು ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಘಟನೆ ನಡೆದಿದೆ. ದೀಪೇಂದರ್ ಅವರನ್ನು ಸನ್ಮಾನಿಸಲು ವೇದಿಕೆ ಮೇಲೆ ಬಂದಿದ್ದ ಮಹಿಳಾ ಕಾರ್ಯಕರ್ತೆಯೊಂದಿಗೆ ನಾಯಕರು ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ. ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು, ತನ್ನ ಪಕ್ಷದ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಘಟನೆಯನ್ನು ದೃಢಪಡಿಸಿದ ಸಂಸದೆ ಕುಮಾರಿ ಸೆಲ್ಜಾ ಆಗ್ರಹಿಸಿದ್ದಾರೆ.
ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಕುಮಾರಿ ಸೆಲ್ಜಾ ಘಟನೆಯನ್ನು ಖಂಡಿಸಿದರು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಕುಮಾರಿ ಸೆಲ್ಜಾ ಅವರು ಯುವತಿಯೊಂದಿಗೆ ಮಾತನಾಡಿ ಅವರು ಕಾರ್ಯಕ್ರಮದ ಉದ್ದಕ್ಕೂ ಕಿರುಕುಳ ಮತ್ತು ನಿಂದನೆಗೆ ಒಳಗಾಗಿರುವುದನ್ನು ಖಚಿತಪಡಿಸಿದ್ದಾರೆ. ಯಾವ ಪಕ್ಷವಾದರೂ ಪರವಾಗಿಲ್ಲ, ಯಾವುದೇ ಮಹಿಳೆಗೆ ಅಗೌರವ ತೋರಬಾರದು ಎಂದು ಸೆಲ್ಜಾ ಹೇಳಿದ್ದಾರೆ.