ಪರಾರಿಯಾದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರ ಪಾಪಲ್ಪ್ರೀತ್ ಸಿಂಗ್ ಅವರಿಗೆ ಆಶ್ರಯ ನೀಡಿದ ಮಹಿಳೆಯನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಬಲ್ಜಿತ್ ಕೌರ್ ಎಂದು ಗುರುತಿಸಲಾದ ಮಹಿಳೆಯು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಮತ್ತು ಆತನ ಸಹಾಯಕರಿಗೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾಳೆ.
ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಮತ್ತು ಆತನ ಸಹಚರರ ವಿರುದ್ಧ ಪಂಜಾಬ್ ಪೊಲೀಸರು ಬೃಹತ್ ಬೇಟೆ ಆರಂಭಿಸಿದಾಗಿನಿಂದ ಅಮೃತಪಾಲ್ ಸಿಂಗ್ ಪರಾರಿಯಾಗಿದ್ದಾರೆ. ಹರಿಯಾಣದಲ್ಲಿ ಮಹಿಳೆಯೊಬ್ಬರ ಬಂಧನವು ಅಮೃತಪಾಲ್ ಸಿಂಗ್ ಪಂಜಾಬ್‌ನಿಂದ ಪಲಾಯನ ಮಾಡಿರಬಹುದು ಎಂಬ ಶಂಕೆ ಮೂಡಿಸಿದೆ. ಶಹಾಬಾದ್ ಪ್ರದೇಶದಿಂದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಪಾಲ್ ಮತ್ತು ಆತನ ಸಹಚರ ಪಾಪಲ್ಪ್ರೀತ್ ಸಿಂಗ್ ಅವರಿಗೆ ಶಹಾಬಾದ್‌ನಲ್ಲಿರುವ ತನ್ನ ಮನೆಯಲ್ಲಿ ರವಿವಾರ ಆಶ್ರಯ ನೀಡಿದ್ದ ಬಲ್ಜಿತ್ ಕೌರ್ ಎಂಬ ಮಹಿಳೆಯನ್ನು ನಾವು ಬಂಧಿಸಿದ್ದೇವೆ. ಮಹಿಳೆಯನ್ನು ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ ಸುರೀಂದರ್ ಸಿಂಗ್ ಭೋರಿಯಾ ಹೇಳಿದ್ದಾರೆ.