ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವುದು ಸಾಮಾನ್ಯ ಸಂಗತಿ. ಹಣ ಮಾತ್ರವಲ್ಲದೆ ಚಿನ್ನ, ಬೆಳ್ಳಿ, ಕುಕ್ಕರ್ ಮೊದಲಾದ ವಸ್ತುಗಳನ್ನು ಸಹ ನೀಡಿರುವುದು ಈಗಾಗಲೇ ಅನೇಕ ಬಾರಿ ಬಹಿರಂಗವಾಗಿದೆ.
ಆದರೆ ಇಲ್ಲೊಂದು ವಿಭಿನ್ನ ಪ್ರಕರಣದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಗ್ರಾಮಸ್ಥರು 2.11 ಕೋಟಿ ರೂಪಾಯಿ ನಗದು ಹಾಗೂ ಎಸ್ ಯು ವಿ ವಾಹನ ನೀಡಿದ್ದಾರೆ. ಹೌದು, ಇಂಥದೊಂದು ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ.
ರೋಹ್ಟಕ್ ಜಿಲ್ಲೆ ಚಿಡಿ ಗ್ರಾಮದ ನವೀನ್ ದಲಾಲ್ ಎಂಬವರು ಗ್ರಾಮ ಪಂಚಾಯಿತಿ ಅಧ್ಯಕ್ಷ (ಸರಪಂಚ್) ಚುನಾವಣೆಗೆ ಸ್ಪರ್ಧಿಸಿದ್ದು, ತಮ್ಮ ಎದುರಾಳಿ ಧರ್ಮಪಾಲ್ ದಲಾಲ್ ವಿರುದ್ಧ 66 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಈ ಚುನಾವಣಾ ಸೋಲು ವೈಷಮ್ಯಕ್ಕೆ ಕಾರಣವಾಗಬಾರದು ಎಂಬ ಕಾರಣಕ್ಕೆ ಹಾಗೂ ಭ್ರಾತೃತ್ವವನ್ನು ಮೆರೆಯುವ ಸಲುವಾಗಿ ಗ್ರಾಮಸ್ಥರು ನವೀನ್ ದಲಾಲ್ ಅವರಿಗೆ ಈ ಉಡುಗೊರೆ ನೀಡಿದ್ದು, ತಾವು ಸೋತರೂ ಸಹ ಗ್ರಾಮಸ್ಥರ ಅಂತಃಕರಣಕ್ಕೆ ನವೀನ್ ಬೆರಗಾಗಿದ್ದಾರೆ.