ಹರ್ಯಾಣದ ಮಾಜಿ ಸಿಎಂ ಮತ್ತು ಐಎನ್‌ಎಲ್‌ಡಿ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಎಲ್ಲರ ಗಮನ ಸೆಳೆದಿದ್ದಾರೆ. ಅಪೂರ್ಣವಾಗಿದ್ದ 10 ನೇ ತರಗತಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಬುಧವಾರ ಹತ್ತನೇ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದರು.
ಹರಿಯಾಣದ ಸಿರ್ಸಾದ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಹರ್ಯಾಣ ಶಾಲಾ ಶಿಕ್ಷಣ ಮಂಡಳಿಯ ಹತ್ತನೇ ತರಗತಿ ಮರು ಪರೀಕ್ಷೆ ನಡೆಯುತ್ತಿದೆ. ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ, ಬುಧವಾರ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಕೇಂದ್ರದ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು.
ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ, 10ನೇ ತರಗತಿ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದರು. ಆದ ಕಾರಣ ಅವರ 12ನೇ ತರಗತಿ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. 86 ವರ್ಷದ ಓಂ ಪ್ರಕಾಶ್ ಚೌಟಾಲ ವಿಕಲಚೇತನರಾಗಿದ್ದು, ಬರೆಯಲು ಸಾಧ್ಯವಿಲ್ಲ. ಆದ್ದರಿಂದ ಪರೀಕ್ಷೆ ಬರೆಯಲು ಇನ್ನೊಬ್ಬ ವ್ಯಕ್ತಿ ನೆರವಾದ್ರು.
ಹರಿಯಾಣದ ಜೆಬಿಟಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಓಂಪ್ರಕಾಶ್ ಚೌಟಾಲ ಶಿಕ್ಷೆ ಅನುಭವಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಂದ ಚೌಟಾಲ, ರಾಜಕೀಯದಲ್ಲಿ ಮತ್ತೆ ಸಕ್ರಿಯವಾಗಿದ್ದಾರೆ.