ಹರಿಯಾಣದ ರೇವಾರಿಯಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಕಳ್ಳರು ಶನಿವಾರ ರಾತ್ರಿ ಸ್ಥಳೀಯ ಬ್ಯಾಂಕ್ ನಿಂದ ಸ್ವಯಂಚಾಲಿತ ಟೆಲ್ಲರ್ ಮೆಷಿನ್(ಎಟಿಎಂ) ಬದಲಿಗೆ ಪಾಸ್ ಬುಕ್ ಮುದ್ರಣ ಯಂತ್ರವನ್ನು ದರೋಡೆ ಮಾಡಿದ್ದಾರೆ.
ಈ ಎರಡು ಯಂತ್ರಗಳ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದ ಕಾರಣ ಕಳ್ಳರು ತಮ್ಮ ಯೋಜನೆಯನ್ನು ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಎಟಿಎಂ ಬದಲು ಪಾಸ್ ಬುಕ್ ಪ್ರಿಂಟಿಂಗ್ ಮೆಷಿನ್ ತೆಗೆದುಕೊಂಡು ಹೋಗಿದ್ದಾರೆ.
ಶನಿವಾರ ತಡರಾತ್ರಿ ರೇವಾರಿಯ ಕೊಸ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಎಟಿಎಂ ಯಂತ್ರವನ್ನು ಕದಿಯಲು ಕಳ್ಳರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನುಗ್ಗಿದ್ದಾರೆ. ಪಾಸ್‌ಬುಕ್ ಮುದ್ರಣ ಯಂತ್ರ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಪೊಲೀಸರು ಬ್ಯಾಂಕ್ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಮುಖ್ಯ ಗ್ರಿಲ್ ಕತ್ತರಿಸಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು ತಕ್ಷಣ ಎಟಿಎಂ ಯಂತ್ರಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಅವರು ಸ್ಟ್ರಾಂಗ್ ರೂಮ್‌ಗೆ ನುಗ್ಗಲು ಪ್ರಯತ್ನಿಸಿದರು; ಆದಾಗ್ಯೂ, ಅವರು ಕೋಣೆಯೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಂತರ ಸಿಸಿಟಿವಿ ಕ್ಯಾಮೆರಾಗಳ ವೈರ್‌ಗಳನ್ನು ಕತ್ತರಿಸಿ ಮೂರು ಪ್ರಿಂಟರ್‌ಗಳು, ನಾಲ್ಕು ಬ್ಯಾಟರಿಗಳು ಮತ್ತು ಡಿವಿಆರ್ ಅನ್ನು ಕದ್ದೊಯ್ದಿದ್ದಾರೆ.
ಭಾನುವಾರ ಬೆಳಗ್ಗೆ ಬ್ಯಾಂಕ್ ದರೋಡೆ ನಡೆದಿರುವುದನ್ನು ಅರಿತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಪೊಲೀಸರು ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ ಮಾಹಿತಿ ಸಂಗ್ರಹಿಸಿದ್ದಾರೆ.