ನವದೆಹಲಿ: ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್‌ನ 3 ಮಹಿಳೆಯರು ಮತ್ತು 3 ಪುರುಷರನ್ನು ಜನವರಿ 9 ರಂದು ಬಂಧಿಸಲಾಗಿದೆ. ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡಿ ವೃದ್ಧರನ್ನು ಮದುವೆಯಾಗಲು ಹಣಕ್ಕಾಗಿ ಆಮಿಷ ಒಡ್ಡಿದ್ದರು. ಇನ್ನೂ 5 ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಗೌತಮಬುದ್ಧ ನಗರ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ವಿಭಾಗದ ಡಿಸಿಪಿ ವೃಂದಾ ಶುಕ್ಲಾ ತಿಳಿಸಿದ್ದಾರೆ.
ಗೌತಮ್ ಬುದ್ಧ ನಗರ ಪೊಲೀಸರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅವರನ್ನು ವಯಸ್ಸಾದ ಪುರುಷರೊಂದಿಗೆ ಮದುವೆಗೆ ಮಾರಾಟ ಮಾಡುತ್ತಿದ್ದ ಹರ್ಯಾಣ ಮೂಲದ ಗ್ಯಾಂಗ್ ಅನ್ನು ಭೇದಿಸಿದ್ದು, ಮೂವರು ಮಹಿಳೆಯರು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ.
12 ವರ್ಷದ ಬಾಲಕಿ ಕಾಣೆಯಾದ ಪ್ರಕರಣವನ್ನು ಸ್ಥಳೀಯ ರಬುಪುರ ಪೊಲೀಸ್ ತಂಡವು ತನಿಖೆ ನಡೆಸುತ್ತಿದ್ದು, ಮಾಹಿತಿ ಆಧರಿಸಿ ಗ್ಯಾಂಗ್ ನವರನ್ನು ಬಂಧಿಸಲಾಗಿದೆ. ಗ್ಯಾಂಗ್ ಯುವತಿಯರನ್ನು ತಮ್ಮೊಂದಿಗೆ ಬರುವಂತೆ ಆಮಿಷವೊಡ್ಡಿ ಕರೆದೊಯ್ದು ನಂತರ ಅವರಿಗಿಂತ ಹೆಚ್ಚು ವಯಸ್ಸಾದ ಪುರುಷರಿಗೆ ಮದುವೆಯಾಗಲು ಹಣಕ್ಕಾಗಿ ಮಾರಾಟ ಮಾಡುತ್ತಿದ್ದರು.
ಕಳೆದ ವರ್ಷ ಡಿಸೆಂಬರ್ 26 ರಂದು, 12 ವರ್ಷದ ಬಾಲಕಿಯ ತಾಯಿ ತನ್ನ ಮಗಳು ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದಳು. ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ ಎಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಎಫ್‌ಐಆರ್ ದಾಖಲಿಸಿದ ಪೊಲೀಸರು ತನಿಖೆ ಪ್ರಾರಂಭಿಸಿದರು, ತನಿಖೆಯ ಸಮಯದಲ್ಲಿ, ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಗ್ಯಾಂಗ್ ಕಂಡುಬಂದಿದೆ ಎಂದು ವೃಂದಾ ಶುಕ್ಲಾ ಅವರು ಹೇಳಿದ್ದಾರೆ.
ಬಾಲಕಿಯನ್ನು ಹರಿಯಾಣದ 52 ವರ್ಷದ ವ್ಯಕ್ತಿಯೊಬ್ಬನಿಗೆ 70,000 ರೂ.ಗೆ ಮಾರಾಟ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ವ್ಯಕ್ತಿಯನ್ನು ಜಸ್ವೀರ್ ಎಂದು ಗುರುತಿಸಲಾಗಿದೆ. ಗ್ಯಾಂಗ್ ಸದಸ್ಯರಾದ ಮೂವರು ಮಹಿಳೆಯರು ಸೇರಿದಂತೆ ಅದರ ಐವರನ್ನು ಬಂಧಿಸಲಾಗಿದೆ. ಹುಡುಗಿಯನ್ನು ಮದುವೆಯಾಗಿದ್ದ ಜಸ್ವೀರ್ ನನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಗ್ಯಾಂಗ್ ಹರಿಯಾಣದ ರೋಹ್ಟಕ್ ನಿಂದ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಗ್ಯಾಂಗ್ ಗೆ ಸಂಬಂಧಿಸಿದ ಇನ್ನೂ ಐದು ಜನರನ್ನು ಗುರುತಿಸಲಾಗಿದೆ. ಪೊಲೀಸರು ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ರಬೂಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.