ಗುರುಗ್ರಾಮ: ಹರಿಯಾಣದ ಖಾಸಗಿ ಆಸ್ಪತ್ರೆಗಳಲ್ಲಿ ಕಡುಬಡವರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ. 5 ಲಕ್ಷ ರೂಪಾಯಿವರೆಗಿನ ಚಿಕಿತ್ಸೆ ಉಚಿತವಾಗಿದ್ದು, ಇದಕ್ಕಾಗಿ ಶೇಕಡ 20ರಷ್ಟು ಹಾಸಿಗೆ ಮೀಸಲಿಡಬೇಕು. ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದ ಖಾಸಗಿ ಆಸ್ಪತ್ರೆಗಳಿಗೆ ಇದು ಅನ್ವಯವಾಗಲಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 20ರಷ್ಟು ಬೆಡ್ ಗಳನ್ನು ಮೀಸಲಿಡಬೇಕು ಎಂದು ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ.
ವೇದಾಂತ, ಫೋರ್ಟಿಸ್ ಆರ್ಟಿಮೆಸ್ ಮೊದಲಾದ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ರಿಯಾಯಿತಿ ದರದಲ್ಲಿ ಜಾಗ ಪಡೆದಿದ್ದು, ವಾರ್ಷಿಕ 1.8 ಲಕ್ಷ ರೂ. ಗಿಂತ ಕಡಿಮೆ ಆದಾಯ ಹೊಂದಿದ ಕುಟುಂಬಗಳಿಗೆ ಸೇರಿದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಶೇಕಡ 20ರಷ್ಟು ಹಾಸಿಗೆ ಮೀಸಲಿಡಬೇಕು. 5 ಲಕ್ಷದಿಂದ 10 ಲಕ್ಷ ರೂಪಾಯಿ ಚಿಕಿತ್ಸೆ ಶುಲ್ಕವಿದ್ದರೆ ಬಿಲ್ ನ ಶೇಕಡ 10 ರಷ್ಟು ಹಣ ಪಡೆಯಬೇಕು. 10 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಶೇ. 30 ರಷ್ಟು ಹಣ ಪಡೆಯಬೇಕು ಎಂದು ಹೇಳಲಾಗಿದೆ.