ಚಂಡೀಗಢ: ರಾಷ್ಟ್ರೀಕೃತ ಬ್ಯಾಂಕೊಂದು ರೈತನ 11 ಲಕ್ಷ ರೂ. ಸಾಲ ಬಾಕಿಯನ್ನು ವಸೂಲಿ ಮಾಡಲು ಬರೊಬ್ಬರಿ 90 ಲಕ್ಷ ರೂ. ಮೌಲ್ಯದ 2.5 ಎಕರೆ ಹೊಲವನ್ನೇ ಹರಾಜು ಹಾಕಿದ ಘಟನೆ ಹರ್ಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಜಲಾಲಾ ವಿರಾನ್ದಲ್ಲಿ ನಡೆದಿದೆ.
ಈ ರೈತ ಸಾಲ ತೀರಿಸಲು ಅಸಮರ್ಥನಾಗಿದ್ದ ಸಂದರ್ಭದಲ್ಲಿ 2014ರಲ್ಲೇ ಜಮೀನು ಹರಾಜು ಹಾಕಿದ್ದಾರೆಂದು ಹರ್ಯಾಣದ ರೈತ ಸಂಘಟನೆಗಳು ಆರೋಪಿಸಿವೆ.
ಈ ವರ್ಷದ ಏಪ್ರಿಲ್ 16ರಂದು ಮಾಜಿ ಸಚಿವರೊಬ್ಬರ ಸಂಬಂಧಿಯೂ ಆಗಿರುವ ವ್ಯಕ್ತಿಯೊಬ್ಬ ಪೊಲೀಸರು ಮತ್ತು ಸ್ಥಳೀಯಾಡಳಿತದ ನೆರವಿನೊಂದಿಗೆ ಹೊಲಕ್ಕೆ ಬಂದು ಅದನ್ನು ಕಬ್ಜಾ ಮಾಡಿಕೊಂಡಾಗಲೇ ಈ ಸಂಗತಿ ಗೊತ್ತಾಗಿದೆ.
ರಿಶ್ಪಾಲ್ ಸಿಂಗ್ (55) ಎಂಬ ರೈತ 2007ರಲ್ಲಿ ಹೈನುಗಾರಿಕೆಯನ್ನು ಆರಂಭಿಸುವುದಕ್ಕಾಗಿ 11 ಲಕ್ಷ ರೂ. ಸಾಲವನ್ನು ಬ್ಯಾಂಕ್ನಿಂದ ಪಡೆದಿದ್ದ. ನಾವು 2 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್ಗೆ ಮರುಪಾವತಿಸಿದ್ದೇವೆ. ಆದರೆ, ನಮ್ಮ ಆರ್ಥಿಕ ಸ್ಥಿತಿ ಹದಗೆಟ್ಟಿತು. ಶೆಡ್ ಕುಸಿದು ಬಿದ್ದ ಕಾರಣ ಹಸುಗಳು ಅಸುನೀಗಿದವು. ವಿಮೆ ಹಣವೂ ಬಾರದ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ರೈತನ ಪುತ್ರ ಗಗನ್ದೀಪ್ ಸಿಂಗ್ ತಿಳಿಸಿದ್ದಾರೆ.
ಬಡ್ಡಿ ಮತ್ತು ದಂಡ ಸಹಿತ 17 ಲಕ್ಷ ರೂ.ಗಳನ್ನು 2017ರಲ್ಲಿ ಪಾವತಿಸಬೇಕಿತ್ತು. ನಮ್ಮ ಜಮೀನನ್ನು ರಹಸ್ಯವಾಗಿ ಹರಾಜು ಹಾಕಿದರು. ಗ್ರಾಮದಲ್ಲಿಯೂ ಯಾವುದೇ ರೀತಿಯ ಘೋಷಣೆಗಳನ್ನು ಮಾಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯ ಮುಖಂಡ ಭಾಧುರ್ ಸಿಂಗ್ ಮೆಹ್ಲಾ ಅವರು ಹೇಳುವಂತೆ, ಹರ್ಯಾಣದ ಮಾಜಿ ಸಚಿವರ ಸಂಬಂಧಿಯೊಬ್ಬರು ಇ-ಹರಾಜಿನಲ್ಲಿ ಈ 2.5 ಎಕರೆ ಜಮೀನನ್ನು ಖರೀದಿಸಿದ್ದರು. ನ್ಯಾಯಾಲಯದ ಮೊರೆಹೋಗಿ ಜಮೀನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಬಂದಿದ್ದರು.
ಐದು ದಿನಗಳ ಹಿಂದೆ ಸ್ಥಳೀಯ ಅಧಿಕಾರಿಗಳು ಮತ್ತು ವಕೀಲರೊಂದಿಗೆ ಬಂದಾಗ ರೈತ ಈ ನಡೆಯನ್ನು ವಿರೋಧಿಸಿದ್ದಾರೆ. ಸದ್ಯಕ್ಕೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡಿದ್ದಾರೆ. ಆದರೆ, ಗುಪ್ತವಾಗಿ ಜಮೀನನ್ನು ಹರಾಜು ಹಾಕಿ ರೈತನಿಗೆ ಅನ್ಯಾಯ ಮಾಡಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.