ನವದೆಹಲಿ: ಹರಿಯಾಣದಲ್ಲಿ ರಸ್ತೆ ಅಪಘಾತದಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರ ಅಜ್ಜಿ, ಚಿಕ್ಕಪ್ಪ ಸಾವನಪ್ಪಿದ್ದಾರೆ.
ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರ ಕುಟುಂಬವು ದುರಂತಕ್ಕೆ ತುತ್ತಾಗಿದೆ. ಭಾರತದ ರಾಷ್ಟ್ರಪತಿಗಳಿಂದ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಕೇವಲ ಎರಡು ದಿನಗಳ ನಂತರ, ಮನು ಅವರ ಚಿಕ್ಕಪ್ಪ ಮತ್ತು ಅಜ್ಜಿ ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಮನು ಭಾಕರ್ ಅವರ ಚಿಕ್ಕಪ್ಪ ಯುಧ್ವೀರ್ ಸಿಂಗ್ ಮತ್ತು ಅಜ್ಜಿ ಸಾವಿತ್ರಿ ದೇವಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹೇಂದರ್‌ಗಢ ಬೈಪಾಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸ್ಕೂಟರ್‌ಗೆ ತಪ್ಪು ಬದಿಯಿಂದ ವೇಗವಾಗಿ ಬಂದ ಬ್ರೆಝಾ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಇಬ್ಬರೂ ನೆಲಕ್ಕೆ ಎಸೆಯಲ್ಪಟ್ಟು ತಕ್ಷಣವೇ ಸಾವನ್ನಪ್ಪಿದ್ದಾರೆ.
ಯುಧ್ವೀರ್ ಸಿಂಗ್ ಕೆಲಸಕ್ಕೆ ಹೋಗುತ್ತಿದ್ದರು, ಅವರ ತಾಯಿ ಸಾವಿತ್ರಿ ದೇವಿ, ಲೋಹರು ಚೌಕ್‌ನಲ್ಲಿರುವ ತಮ್ಮ ಕಿರಿಯ ಮಗನನ್ನು ಭೇಟಿ ಮಾಡಲು ಅವರೊಂದಿಗೆ ತೆರಳುತ್ತಿದ್ದರು. ಇಬ್ಬರೂ ಕಲ್ಯಾಣ ಮಾಡ್ ಪ್ರದೇಶವನ್ನು ತಲುಪುತ್ತಿದ್ದಂತೆ ರಸ್ತೆಯ ತಪ್ಪು ಬದಿಯಿಂದ ವೇಗವಾಗಿ ಬರುತ್ತಿದ್ದ ಬ್ರೆಝಾ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಕಾರು ರಸ್ತೆಬದಿಯಲ್ಲಿ ಉರುಳಿಬಿದ್ದಿದೆ. ಅಪಘಾತದ ನಂತರ, ಬ್ರೆಝಾ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.