ಹರಿಯಾಣದ ಬಹದ್ದೂರ್ ಗಢದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬುಧವಾರ ಗ್ಯಾಸ್ ಸೋರಿಕೆಯಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿದೆ.
ಕಾರ್ಮಿಕರು 5 ಅಡಿ ಆಳದ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ವೇಳೆ ಅನಿಲ ಸೋರಿಕೆಯಾಗಿ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಶಕ್ತಿ ಸಿಂಗ್ ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ವಾಸಿಂ ಅಕ್ರಂ, ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಐಸಿಯುನಲ್ಲಿದ್ದಾರೆ. ಕುಟುಂಬಗಳನ್ನು ಸಂಪರ್ಕಿಸಲಾಗುತ್ತಿದೆ. ತನಿಖೆ ನಡೆಸಲಾಗುವುದು ಎಂದು ಹೇಳಿದರು.