ನವದೆಹಲಿ: ದೆಹಲಿ -ಹರ್ಯಾಣ ಹೆದ್ದಾರಿಯ ಬಹದ್ದೂರ್ ಗಢ ಸಮೀಪ ಝಜ್ಜರ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದ ಬಳಿ ಲಾರಿ ಹರಿದು ಮೂವರು ಹಿರಿಯ ರೈತ ಮಹಿಳೆಯರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ರೈತ ಮಹಿಳೆಯರು ಪಂಜಾಬ್ ನ ಮಾನ್ಸಾ ಜಿಲ್ಲೆಯವರಾಗಿದ್ದಾರೆ. ನಿರಂತರ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ ಅವರ ಅವಧಿ ಮುಗಿದಿದ್ದು, ಮನೆಗೆ ಹೋಗಲು ಆಟೋರಿಕ್ಷಾಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಅವರ ಮೇಲೆ ಹರಿದಿದೆ. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕಳೆದ ವರ್ಷದ ನವೆಂಬರ್ ನಿಂದಲೂ ರೈತರು ಟಕ್ರಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ಕೈಗೊಂಡಿದ್ದಾರೆ. ರೊಟೇಷನ್ ಮೇಲೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮಾನ್ಸಾ ಜಿಲ್ಲೆಯ ರೈತ ಮಹಿಳೆಯರು ಪ್ರತಿಭಟನೆ ಮುಗಿಸಿ ಊರಿಗೆ ಹೊರಟ ಸಂದರ್ಭದಲ್ಲಿ ಇಂತಹ ಘೋರ ದುರಂತ ಸಂಭವಿಸಿದೆ.