ಶಿವಮೊಗ್ಗ : ಕಾನು ಸೊಪ್ಪಿನ ಬೆಟ್ಟ ಹುಲ್ಲು ಚಾಡಿ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಪಾರಂಪರಿಕವಾಗಿ ಸಾಗುವಳಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಕೃಷಿ ಕಾರ್ಮಿಕರನ್ನು ಒಕ್ಕಲಿಸುವುದು ಸರಿಯಲ್ಲ. ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾರ್ಯ ನಿರ್ವಹಿಸುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಶಾಸಕರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಬಗರ್ ಹುಕುಂ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಯು ಬಹು ದಿನಗಳಿಂದ ಇತ್ತು. ಈ ಸಮಸ್ಯೆಯ ಕುರಿತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರನ್ನು ಒಮ್ಮೆಲೇ ಒಕ್ಕಲೆಬ್ಬಿಸುವುದರಿಂದ ಅನೇಕ ಕುಟುಂಬಗಳ ಬದುಕು ಶೋಚನೀಯವಾಗಲಿದೆ ಆದ್ದರಿಂದ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಹಾಗೂ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ವಿಷಯದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರಿಗಳ ದುರ್ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು.
ಅರಣ್ಯ ಮತ್ತು ಕಂದಾಯ ಭೂಮಿಗೆ ಸಂಬಂಧಿಸಿದಂತೆ ಹಲವು ದಶಕಗಳಿಂದ ಅನೇಕ ಸಮಸ್ಯೆಗಳು ಇತ್ಯರ್ಥಗೊಳ್ಳದೆ ಹಾಗೆಯೇ ಬಾಕಿ ಉಳಿದಿದೆ. ಅವುಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತ್ಯರ್ಥಪಡಿಸಲಾಗುವುದು ಎಂದವರು ನುಡಿದರು.
ಅರಣ್ಯ ಇಲಾಖೆಯ ಅರಣ್ಯ ರಕ್ಷಕರು ಅಥವಾ ವನಪಾಲಕರು ಬಗರ್ ಹುಕುಂ ಸಾಗುವಳಿದಾರರ ವಿರುದ್ಧ ಮಾನವೀಯತೆ ಮರೆತು ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಇಲಾಖೆಯ ಜವಾಬ್ದಾರಿಯುತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ದೂರುಗಳು ಬರದಂತೆ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಬಗುರ್ ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಬಗರ್ ಹುಕುಂ ಸಮಿತಿಯಲ್ಲಿ ಅರ್ಜಿಗಳನ್ನು ತಿರಸ್ಕರಿಸುವ ಮುನ್ನ ಸಚಿವರ ಗಮನಕ್ಕೆ ತರುವಂತೆ ಸೂಚಿಸಿದವರು. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಪಕ್ಷಾತೀತವಾಗಿ ಚರ್ಚಿಸಿ ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಹಸಿಲ್ದಾರ್ ಮಂಜುಳಾ ಹೆಗಡಾಳ ಅವರು ಮಾತನಾಡಿ ಬಗರ್ ಹುಕುಂ ಜಮೀನು ಮಂಜುರಾತಿಗೆ ಸಂಬಂಧಿಸಿದಂತೆ ಈಗಾಗಲೇ ಆನ್ಲೈನ್ ಮೂಲಕ 5113 ಅರ್ಜಿಗಳು ದಾಖಲಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಬಗರ್ ಹುಕುಂ ಸಮಿತಿಗೆ ಮಂಡಿಸಲಾಗುವುದು. 91 ಅರ್ಜಿದಾರರಿಗೆ ಹಕ್ಕುಪತ್ರ ವಿತರಣೆ, 166 ಜನರಿಗೆ ನೋಂದಣಿ ಮಾಡಿಸಿಕೊಡಬೇಕಾದ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು ನೂತನ ಸಮಿತಿ ಸದಸ್ಯರು ಇ-ಕೆವೈಸಿ ಮಾಡಿಸಿದ ನಂತರ ಸಾಗುವಳಿದಾರರ ಅರ್ಜಿಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.ಸಭೆಯಲ್ಲಿ ಬಗರ್ ಹುಕುಂ ಸಮಿತಿಯ ನೂತನ ಅಧ್ಯಕ್ಷ ಎಂ. ಡಿ. ಶೇಖರ್ ಸೇರಿದಂತೆ ಸಮಿತಿಯ ನೂತನ ಸದಸ್ಯರು ಹಾಗೂ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.