ಧಾರವಾಡ: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೆಸರು ಬರೆದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಶಕುಂತಲಾ ಮನಸೂರ್ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಶಕುಂತಲಾ ಕಳೆದ 20 ವರ್ಷಗಳಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡದಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ರವಿ ಬೆಂತೂರು ಎಂಬ ಅಧಿಕಾರಿ ಶಕುಂತಲಾ ವಿರುದ್ಧ ಲಂಚದ ಆರೋಪ ಮಾಡಿ ನಾಲ್ಕು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಿದ್ದರು. ಮತ್ತೆ ಕೆಲಸಕ್ಕಾಗಿ ಶಕುಂತಲ ಸಾಕಷ್ಟು ಪ್ರಯತ್ನ ನಡೆಸಿದ್ದರು.
ನಿನ್ನೆ ಸಚಿವ ಶ್ರೀರಾಮುಲು ಧಾರವಾಡಕ್ಕೆ ಭೇಟಿ ನೀಡಿದ್ದ ವೇಳೆ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ನೀಡಲು ಹೋಗಿದ್ದರು. ಆದರೆ ಸಚಿವರು ಸಿಕ್ಕಿಲ್ಲ. ಇದರಿಂದ ಶಾಸಕ ಅರವಿಂದ್ ಬೆಲ್ಲದ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಈ ವೇಳೆ ಶಾಸಕರು ಎಲ್ಲರ ಮುಂದೆ ಬಹಿರಂಗವಾಗಿ ಲಂಚ ತೆಗೆದುಕೊಂಡಿದ್ದೀಯಾ ಎಂದು ಹೇಳಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಶಾಸಕರು ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ಮನನೊಂದ ಶಕುಂತಲಾ ಡೆತ್ ನೋಟ್ ನಲ್ಲಿ ಶಾಸಕರ ಹೆಸರು ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಶಕುಂತಾಳರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.