ರಾಮನಗರ: ಅಕ್ರಮವಾಗಿ ಮಣ್ಣು ಸಾಗಿಸುವುದನ್ನು ಪ್ರಶ್ನಿಸಿದ ತಹಶೀಲ್ದಾರ್ ಮೇಲೆ ಲಾರಿ ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ಹಾರೋಹಳ್ಳಿ ತಾಲೂಕಿನ ಭೀಮಸಂದ್ರ ಸಮೀಪ ನಡೆದಿದೆ.
ತಹಶೀಲ್ದಾರ್ ವಿಜಯಣ್ಣ ಅವರ ಮೇಲೆ ಅಂಚಿಬಾರೆ ಗ್ರಾಮದ ಮಹೇಶ್ ಕುಮಾರ್ ಲಾರಿ ಹತ್ತಿಸಿ ಕೊಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 29ರಂದು ಭೀಮಸಂದ್ರ ಗ್ರಾಮದ ಸರ್ವೇ ನಂಬರ್ 42ರ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಿಸುತ್ತಿರುವ ಬಗ್ಗೆ ತಹಶೀಲ್ದಾರ್ ವಿಜಯಣ್ಣ ಅವರಿಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ತೆರಳಿ ಲಾರಿ ನಿಲ್ಲಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಲಾರಿ ನಿಲ್ಲಿಸದ ಚಾಲಕ ವಿಜಯಣ್ಣ ಅವರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದಾರೆ. ಬಳಿಕ ಸರ್ಕಾರಿ ವಾಹನದಲ್ಲಿ ಚೇಸ್ ಮಾಡಿ ಲಾರಿ ಅಡ್ಡ ಗಟ್ಟಿ ರಾಜಸ್ವ ನಿರೀಕ್ಷಕರನ್ನು ಕರೆಸಿ ಲಾರಿಯೊಂದಿಗೆ ಚಾಲಕನನ್ನು ಒಪ್ಪಿಸಿದ್ದಾರೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.