ಹೈ-ಎಂಡ್ ಬೈಕ್ ಪ್ರಿಯರ ನೆಚ್ಚಿನ ಕಂಪೆನಿಗಳಲ್ಲಿ ಒಂದಾದ ಹಾರ್ಲೆ-ಡೇವಿಡ್ಸನ್ ಕಳೆದ ವರ್ಷ ಭಾರತದಲ್ಲಿ ಮತ್ತೊಮ್ಮೆ ನಂಬರ್ 1 ಸ್ಥಾನಕ್ಕೇರಿತ್ತು. 2020 ರಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿದ್ದ ಕಂಪೆನಿ, ಆ ಬಳಿಕ ಹೀರೋ ಮೋಟೋಕಾರ್ಪ್ನ ಸಹಭಾಗಿತ್ವದಲ್ಲಿ ಮರಳಿತ್ತು. ಎರಡು ವರ್ಷಗಳಲ್ಲೇ ಮತ್ತೊಮ್ಮೆ ಭಾರತದ ಹೈ-ಎಂಡ್ ಮೋಟಾರ್‌ಸೈಕಲ್ ವಿಭಾಗದಲ್ಲಿ ನಂಬರ್ 1 ಸ್ಥಾನ ಅಲಂಕರಿಸುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.
ಇದೀಗ ಕಂಪೆನಿಯ ರೋಡ್ ಗ್ಲೈಡ್ ಮತ್ತು ಸ್ಟ್ರೀಟ್ ಗ್ಲೈಡ್ ಮೋಟಾರ್‌ಸೈಕಲ್‌ಗಳ ಚಿತ್ರಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಈ ಮೋಟಾರ್‌ಸೈಕಲ್‌ಗಳು ಬ್ರ್ಯಾಂಡ್‌ನ CVO ಶ್ರೇಣಿಯ ಭಾಗವಾಗಿದೆ.
ರೋಡ್ ಗ್ಲೈಡ್ ಈಗ ತೀಕ್ಷ್ಣವಾದ ವಿನ್ಯಾಸ ಮತ್ತು ಹೊಸ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಪೂರ್ಣವಾಗಿ ಮರುವಿನ್ಯಾಸಗೊಂಡಿರುವುದನ್ನು ನೋಡಬಹುದಾಗಿದೆ. ಫೈರಿಂಗ್‌ನ ಮೇಲೆ ದೊಡ್ಡದಾದ ಹೊಸ ವಿಂಡ್‌ಸ್ಕ್ರೀನ್ ಕೂಡ ಇದೆ. ಮತ್ತೊಂದೆಡೆ ಸ್ಟ್ರೀಟ್ ಗ್ಲೈಡ್ DRL ಗಳ ಜೊತೆಗೆ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿರುವ ಹೆಚ್ಚು ವಿಕಸನೀಯ ಶೈಲಿಯನ್ನು ಹೊಂದಿರುವುದನ್ನು ನೋಡಬಹುದಾಗಿದೆ.
ಹಾರ್ಲೆ-ಡೇವಿಡ್‌ಸನ್ ಮೋಟಾರ್‌ಸೈಕಲ್‌ಗಳನ್ನು ಹೊಸ 1982 cc ಎಂಜಿನ್‌ನೊಂದಿಗೆ ನೀಡಲಿದ್ದು, ಅದು ಹಳೆಯ 1917 cc ಎಂಜಿನ್‌ಗಳನ್ನು ಬದಲಿಸುತ್ತದೆ. ಎಂಜಿನ್ ಕವರ್‌ನಲ್ಲಿ VVT ಬ್ರ್ಯಾಂಡಿಂಗ್ ಇರುವುದನ್ನು ಕಾಣಬಹುದು.
ಈ ಫೋಟೋಗಳು ಕೇವಲ ಒಂದು ನೋಟವನ್ನು ನೀಡುತ್ತವೆಯಾದರೂ, ಹಾರ್ಲೆ-ಡೇವಿಡ್ಸನ್ ತನ್ನ ರೋಡ್ ಗ್ಲೈಡ್ ಮತ್ತು ಸ್ಟ್ರೀಟ್ ಗ್ಲೈಡ್ ಮೋಟಾರ್‌ಸೈಕಲ್‌ಗಳಿಗೆ ಕೆಲವು ಪ್ರಮುಖ ನವೀಕರಣಗಳನ್ನು ತರುತ್ತಿದೆ ಎಂಬುದಕ್ಕೆ ಪುರಾವೆಯಾಗಿದೆ. ಈ ಮೋಟಾರ್‌ಸೈಕಲ್‌ಗಳು ಭಾರತೀಯ ರಸ್ತೆಗಳಲ್ಲಿ ಹೇಗೆ ಸಂಚಾರ ಮಾಡುತ್ತದೆ ಎಂಬ ಬಗ್ಗೆ ಸದ್ಯ ಯಾವುದೇ ಮಾಹಿತಿ ಸಿಕ್ಕಿಲ್ಲ.