ಮದುವೆ ಮನೆಗಳಲ್ಲಿ ಸಂಬಂಧಿಗಳು ಅಸಮಾಧಾನಗೊಳ್ಳುವುದು ನಮ್ಮ ದೇಶದಲ್ಲಿ ಹೊಸದೇನಲ್ಲ. ಉತ್ತರಾಖಂಡದ ಹರಿದ್ವಾರದಲ್ಲಿ ಒಂದು ರೋಚಕ ಟನೆ ನಡೆದಿದ್ದು, ಮದುವೆ ಕಾರ್ಡ್ನಲ್ಲಿ ನಮೂದಿಸಲಾದ ಸಮಯಕ್ಕಿಂತ ಮುಂಚಿತವಾಗಿ ಮದುವೆ ದಿಬ್ಬಣ ಹೊರಟು ಹೋಗಿದ್ದರಿಂದ ಅಸಮಾಧಾನಗೊಂಡ ವರನ ಸ್ನೇಹಿತ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾನೆ.
ಇದೊಂದು ಅಚ್ಚರಿಯ ಅಪರೂಪದ ಪ್ರಕರಣ. ಮದುವೆ ದಿಬ್ಬಣ ಸಂಜೆ 5 ಗಂಟೆಗೆ ಹೊರಡಬೇಕಿತ್ತು. ನಿಗದಿತ ಸಮಯಕ್ಕೆ ವರನ ಸ್ನೇಹಿತ ಚಂದ್ರಶೇಖರ್ ಆಗಮಿಸಿದಾಗ ದಿಬ್ಬಣ ಹೊರಟುಹೋಗಿತ್ತು. ಈ ವೇಳೆ ವರನಿಗೆ ಕರೆ ಮಾಡಿದಾಗ, ನೀನು ಬಂದಿದ್ದು ತಡವಾಯಿತು ಎಂಬ ಉತ್ತರ ಬಂದಿದೆ.
ಇದರಿಂದ ಅಸಮಾಧಾನಗೊಂಡ ಚಂದ್ರಶೇಖರ್, ವರನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾನೆ. ಮದುವೆಗೆ ಕರೆದು ಮಾನಸಿಕ ಹಿಂಸೆ ನೀಡಿದ್ದಾರೆ, ಹೀಗಾಗಿ 50 ಲಕ್ಷ ಪರಿಹಾರದ ಜೊತೆಗೆ ವರನು ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾನೆ.
ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಇಂತಹದ್ದೇ ಒಂದು ಘಟನೆಯಲ್ಲಿ, ವರನು ಮದುವೆಗೆ ತಡವಾಗಿ ಬಂದನೆಂದು ವಧು ತನ್ನ ಸಂಬಂಧಿಯನ್ನು ಮದುವೆಯಾದಳು.
ಏಪ್ರಿಲ್ 22 ರಂದು ಸಂಜೆ 4 ಗಂಟೆಗೆ ವಿವಾಹ ಸಮಾರಂಭ ಆಯೋಜನೆಗೊಂಡಿತ್ತು. ರಾತ್ರಿ 8 ಗಂಟೆಯಾದರೂ ವರ ಮಂಟಪಕ್ಕೆ ಬಂದಿರಲಿಲ್ಲ. ವರನು ಅಂತಿಮವಾಗಿ ಹಾಜರಾದರೂ ತನ್ನ ಸ್ನೇಹಿತರೊಂದಿಗೆ ನೃತ್ಯ ಮತ್ತು ಕುಡಿಯುವುದನ್ನು ಮುಂದುವರೆಸಿದ್ದನು.
ಆತನ ವರ್ತನೆಯಿಂದ ಸಿಟ್ಟಿಗೆದ್ದ ವಧುವಿನ ಮನೆಯವರು ಮದುವೆಯನ್ನು ನಿಲ್ಲಿಸಿ ದಿಬ್ಬಣ ವಾಪಸ್ ಕಳುಹಿಸಿದ್ದಾರೆ. ನಂತರ ಅದೇ ದಿನ ಸಂಜೆ ಮದುವೆಗೆ ಅತಿಥಿಯಾಗಿ ಬಂದಿದ್ದ ತನ್ನ ಸಂಬಂಧಿಕರೊಬ್ಬರನ್ನು ವಧು ಮದುವೆಯಾದಳು.