ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಆ ಪಕ್ಷದ ಮುಖಂಡರಿಗೆ ಮುಜುಗರ ಉಂಟುಮಾಡಿರುವ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ತಮ್ಮದೇ ಹಳೆಯ ಅಭಿಪ್ರಾಯದ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.
ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ, ಪಕ್ಷದ ಪಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಾರ್ದಿಕ್ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ಅವರು ತಾವು ಎಂದಿಗೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಬಹಳ ಹಿಂದೆ ಮಾಡಿದ್ದ ಟ್ವೀಟ್ ಮುನ್ನೆಲೆಗೆ ಬಂದಿದೆ.
ಹಾರ್ದಿಕ್ ಪಟೇಲ್ ರಾಜೀನಾಮೆ ನೀಡಿದ ತಕ್ಷಣ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಳೆಯ ಟ್ವೀಟ್ನ ಸ್ಕ್ರೀನ್ಶಾಟ್ ಬಳಸಿ ಟ್ವೀಟ್ ಮಾಡಿದ್ದಾರೆ.
ಸೋಲು ಅಥವಾ ಗೆಲ್ಲುವ ಭಯದಿಂದ ವ್ಯಾಪಾರಿಗಳು ಮಾತ್ರ ತಮ್ಮ ಪಕ್ಷ ಬದಲಾಯಿಸುತ್ತಾರೆ. ಸಿದ್ಧಾಂತ ಅನುಸರಿಸುವವರು ಪಕ್ಷ ಬದಲಾಯಿಸುವುದಿಲ್ಲ. ನಾನು ಹೋರಾಡುತ್ತೇನೆ, ಗೆಲ್ಲುತ್ತೇನೆ ಮತ್ತು ಎಂದಿಗೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.
ನಾನು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಎಲ್ಲಾ ಬೆಂಬಲಿಗರು ಮತ್ತು ಗುಜರಾತ್ನ ಜನರು ಈ ನಿರ್ಧಾರವನ್ನು ಸ್ವಾಗತಿಸುತ್ತಾರೆ ಎಂಬ ವಿಶ್ವಾಸವಿದೆ. ಭವಿಷ್ಯದಲ್ಲಿ ನಾನು ಗುಜರಾತ್ಗಾಗಿ ಧನಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ. ಈ ಅಭಿಪ್ರಾಯದ ಜೊತೆಗೆ ರಾಜೀನಾಮೆ ಪತ್ರವನ್ನೂ ಬಹಿರಂಗಪಡಿಸಿದ್ದಾರೆ.
ಗುಜರಾತ್ ಜನತೆಯ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗಲೆಲ್ಲ, ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಸಂದೇಶಗಳನ್ನು ಪರಿಶೀಲಿಸುವುದರಲ್ಲಿ ನಿರತರಾಗಿರುತ್ತಾರೆ ಮತ್ತು ಪಕ್ಷ ಮತ್ತು ದೇಶಕ್ಕೆ ಅವರ ಅವಶ್ಯಕತೆ ಇದ್ದಾಗ ಕೆಲವು ನಾಯಕರು ವಿದೇಶದಲ್ಲಿ ಆನಂದಿಸುತ್ತಿದ್ದರು ಎಂದು ಯಾರ ಹೆಸರು ಪ್ರಸ್ತಾಪಿಸದೇ ಟೀಕಿಸಿದ್ದರು.
ಪಕ್ಷದ ಪಂಜಾಬ್ ಘಟಕದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಮತ್ತೋರ್ವ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್ ಕೂಡ ಇದೇ ರೀತಿಯಲ್ಲಿ ರಾಜೀನಾಮೆ ನೀಡಿದ್ದಾರೆ. ಪಟೇಲ್ ಕೆಲವು ಸಮಯದಿಂದ ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದು ಇತ್ತೀಚೆಗೆ ಬಿಜೆಪಿಯನ್ನು ಹೊಗಳಿದ್ದರು.