ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶರಾವತಿ ಹಾಗೂ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ನೀಡುವ ಸಂಬಂಬಂಧ ಕಾನೂನಿಗೆ ಮಾರ್ಪಾಡು ಮಾಡಲು ಬೆಂಗಳೂರಿನಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ, ಅರಣ್ಯ ಸಚಿವರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ 1960 ರಿಂದ 66 ರವರೆಗೆ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಅದರಲ್ಲಿ ಈ ಎರಡೂ ಅಭಯಾರಣ್ಯದಲ್ಲಿ ಪುನರ್ವಸತಿ ಕಲ್ಪಿಸಿದವರಿಗೆ ಇಂದಿಗೂ ಸರಿಯಾಗಿ ಜಮೀನಿನ ದಾಖಲೆಗಳು ಲಭ್ಯವಾಗಿಲ್ಲ. ಅರಣ್ಯದಲ್ಲಿ ಪುನರ್ವಸತಿ ಪಡೆದ ಗ್ರಾಮಗಳಿಗೆ ಇನ್ನೂ ರಸೆ ಸಂಪರ್ಕ ಸೇರಿದಂತೆ ಇತರೆ ಮೂಲ ಸೌಕರ್ಯಗಳು ಇಲ್ಲದಾಗಿದೆ ಎಂದರು.
ಇದರಿಂದಾಗಿ ಅಭಯಾರಣ್ಯದಲ್ಲಿರುವ ಜನ ವಸತಿ ಪ್ರದೇಶಗಳನ್ನು ಹೊರತುಪಡಿಸಿ ಅಭಯಾರಣ್ಯ ಗುರುತು ಮಾಡಲು ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ಈ ಸಭೆ ಅತ್ಯಂತ ಮಹತ್ವದ್ದಾಗಿದೆ. ವಿದ್ಯುತ್, ರಸ್ತೆ ಸಂಪರ್ಕ ನೀಡುವುದು, ಅರಣ್ಯವಾಸಿಗಳ ಪರಂಪರಾಗತ ಹಕ್ಕು ಕಾಯ್ದಿರಿಸುವುದು, ಪ್ರತೀ ಜನವಸತಿ ಕಂದಾಯ ಗ್ರಾಮಗಳಲ್ಲಿ ಗ್ರಾಮ ಠಾಣಾ ಗುರುತಿಸುವುದು ಸೇರಿದಂತೆ ಇತರೆ ಅಂಶಗಳ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದೆಂದು ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯ ಡಿನೋಟಿಫಿಕೇಶನ್ ಹೈಕೋರ್ಟ್ ವಜಾಗೊಳಿಸಿರುವುದು ಕೂಡ ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾನೂನು ತೊಡಕು ನಿವಾರಣೆಗೂ ಚರ್ಚಿಸಲಾಗುತ್ತದೆ ಎಂದ ಅವರು, ಮುಳುಗಡೆ ಸಂತ್ರಸ್ತರಿಗೆ ಮೊದಲ ಆದ್ಯತೆಯಲ್ಲಿ ನ್ಯಾಯ ಕೊಡಿಸುವುದು ನನ್ನ ಆದ್ಯತೆಯಾಗಿದೆ. ಇದಕ್ಕಾಗಿಯೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ ಎಂದರು.