
ಮೈಸೂರು: ಹುಣಸೂರು ತಾಲೂಕಿನ ಸರ್ಕಾರಿ ಶಾಲೆಯೊಂದರ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮಾಜಿ ಅತಿಥಿ ಶಿಕ್ಷಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರವಿ(42) ಬಂಧಿತ ಆರೋಪಿ. ವಿವಾಹಿತನಾಗಿರುವ ಆರೋಪಿ ರವಿ ಶಾಲೆಯಲ್ಲಿ ಹಿಂದೆ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಕೆಲಸ ಬಿಟ್ಟ ಬಳಿಕ ಗ್ರಾಮ ಒನ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಶನಿವಾರ ಮಧ್ಯಾಹ್ನದ ಬಳಿಕ ವಿದ್ಯಾರ್ಥಿನಿಯನ್ನು ಹಿರಿಯ ಪ್ರಾಥಮಿಕ ಶಾಲೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಈ ವಿಷಯ ತಿಳಿದು ಅಲ್ಲಿಗೆ ಬಂದ ಬಾಲಕಿಯ ಸಹೋದರ ಮತ್ತು ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿಯ ತಾಯಿ ಹಾಗೂ ಬಿಇಒ ಹುಣಸೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಶಾಲೆಗೆ ಪೊಲೀಸ್ ಇನ್ಸ್ ಪೆಕ್ಟರ್ ಮುನಿಸ್ವಾಮಿ, ಬಿಇಒ ಮಹದೇವ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮಾಜಿ ಅತಿಥಿ ಶಿಕ್ಷಕನಿಗೆ ಶಾಲೆಯ ಬೀಗ ಸಿಕ್ಕಿದ್ದು ಹೇಗೆ? ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ. ಮುಖ್ಯ ಶಿಕ್ಷಕ ಬಿ.ಎಂ. ಸತೀಶ್ ಕರ್ತವ್ಯ ಲೋಪ ಎಸಗಿದ ಆರೋಪ ಕೇಳಿ ಬಂದಿದೆ. ಮುಖ್ಯ ಶಿಕ್ಷಕನ ವಿರುದ್ಧವೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.