ಬೆಂಗಳೂರು: ತನಿಖಾ ಸಂಸ್ಥೆಗಳ ಮೂಲಕ ನಮ್ಮ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಅಧಿವೇಶನ ನಾಳೆಯಿಂದ ಆರಂಭವಾಗುತ್ತಿದೆ. ಅಧಿವೇಶನ ಇದ್ದರೂ ಜುಲೈ 21ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಇಡಿ ವಿಚಾರಣೆಗೆ ಬರಲು ಸೂಚನೆ ನೀಡಿದೆ. ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ನಮ್ಮ ನಾಯಕರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಇಡಿ ಮಾಡುತ್ತಿದೆ. ನಾವು ಹೆದರುವ ಪ್ರಶ್ನೆಯೇ ಇಲ್ಲ, ಇಡಿ ವಿಚಾರಣೆ ವಿರುದ್ಧ ಜುಲೈ 21ರಂದು ಫ್ರೀಡಂ ಪಾರ್ಕ್ ನಿಂದ ರಾಜಭವನ ಚಲೋ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಜುಲೈ 22ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಆಕ್ರೋಶ ವ್ಯಕ್ತವಾಗಲಿದೆ. ಈ ಮೂಲಕ ಸೋನಿಯಾ ಗಾಂಧಿಯವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.